
ಕೇಂದ್ರ ಸಚಿವ ನಿತಿನ್ ಗಡ್ಕರಿ ಗುಣಗಾನ ಮಾಡಿದ ಸಚಿವ ಸತೀಶ್ ಜಾರಕಿಹೊಳಿ..!
ಶಿವಮೊಗ್ಗ, ಫೆ. 22: ಒಂದೆಡೆ, ರಾಜ್ಯಕ್ಕೆ ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ದ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಅವರ ಸಚಿವ ಸಂಪುಟದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ (Minister Satish Jarakiholi) ಅವರು ಕೇಂದ್ರ ಸರ್ಕಾರದ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ (Union Minister Nitin Gadkari) ಯವರನ್ನು ಸಾರ್ವಜನಿಕ ಸಮಾರಂಭದಲ್ಲಿಯೇ ಹಾಡಿ ಹೊಗಳಿದ್ದಾರೆ!
ಗುರುವಾರ ಮಧ್ಯಾಹ್ನ ಶಿವಮೊಗ್ಗ (shimoga) ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ 6168 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ನೆರವೇರಿಸಿದರು. ಇದಕ್ಕೂ ಮುನ್ನ ಸಮಾರಂಭ ಉದ್ದೇಶಿಸಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿದರು.
‘ಇಂದು ಬೆಳಗಾವಿಯಲ್ಲಿ ಸುಮಾರು 7 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿ ಹಾಗೂ ಶಿವಮೊಗ್ಗ ಸುತ್ತಮುತ್ತಲಿನ ಜಿ್ಲ್ಲೆಗಳಿಗೆ ಸಂಬಂಧಿಸಿದಂತೆ 6200 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ನಿತಿನ್ ಗಡ್ಕರಿ ಅವರು ಚಾಲನೆ ನೀಡಿದ್ದಾರೆ. ಕರ್ನಾಟಕಕ್ಕೆ ಬಹಳ ವಿಶೇಷ ಹಾಗೂ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದೆ’ ಎಂದು ಹೇಳಿದರು.
ಯಾವುದೇ ಅಭಿವೃದ್ದಿಯಲ್ಲಿ ರಸ್ತೆಗಳು ಅತ್ಯಂತ ಮಹತ್ವದ್ದಾಗಿದೆ. ರಸ್ತೆಗಳು ಉತ್ತಮವಾಗಿದ್ದರೆ ಅಭಿವೃದ್ದಿಯೂ ಚೆನ್ನಾಗಿ ಆಗುತ್ತದೆ. ಗಡ್ಕರಿ ಅವರು ಸಚಿವರಾದ ನಂತರ, ಕಳೆದ 10 ವರ್ಷಗಳ ಅವಧಿಯಲ್ಲಿ ಸಾಕಷ್ಟು ಬದಲಾವಣೆ ಮಾಡಲು ಯತ್ನಿಸಿದರು. ಇದರಲ್ಲಿ ಅವರು ಯಶಸ್ವಿ ಕೂಡ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರಣದಿಂದ ಗಡ್ಕರಿ ಅವರ ಬಗ್ಗೆ ನಮಗೆ ವಿಶೇಷ ಕಾಳಜಿಯಿದೆ. ಪಕ್ಷದ ಪರವಾಗಿ ಅವರು ಕಾರ್ಯನಿರ್ವಹಣೆ ಮಾಡದೆ ದೇಶ, ರಾಜ್ಯಕ್ಕೆ ಬದ್ದರಾಗಿ ಕಾರ್ಯನಿರ್ವಹಣೆ ಮಾಡುತ್ತಾರೆ. ಈ ಕಾರಣದಿಂದ ಅವರನ್ನು ಹೆಚ್ಚು ಪ್ರೀತಿಸುತ್ತೆವೆ. ಗೌರವಿಸುತ್ತೆವೆ. ಅಂತಹವರ ಅವಶ್ಯಕತೆ ಬಹಳಷ್ಟಿದೆ ಎಂದು ಗುಣಗಾನ ಮಾಡಿದರು.
ಕೇಂದ್ರ ಹಾಗೂ ರಾಜ್ಯಗಳಲ್ಲಿ ಸರ್ಕಾರಗಳು ಬೇರೆ ಬೇರೆ ಇದ್ದಾಗ ಸಂಘರ್ಷಗಳಾಗುತ್ತವೆ. ಆದರೆ ನಿತಿನ್ ಗಡ್ಕರಿ ಅವಧಿಯಲ್ಲಿ ಇದಕ್ಕೆ ಆಸ್ಪದವೇ ಇಲ್ಲವಾಗಿದೆ. ಕಳೆದ 9 ತಿಂಗಳ ಅವಧಿಯಲ್ಲಿ ಐದು ಬಾರಿ ಅವರನ್ನು ಭೇಟಿಯಾಗಿದ್ದೆನೆ. ರಾಜ್ಯದ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿದ್ದೆನೆ. ಕಳೆದ 12 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಇಲಾಖೆಯ ಯೋಜನೆಗಳ ಸಮಸ್ಯೆ ಪರಿಹಾರವಾಗಿದೆ ಎಂದರು.
ರಾಜ್ಯದಿಂದ ನೆರವು ಸಿಗಬೇಕಾದ ಯೋಜನೆಗಳ ಬಗ್ಗೆ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ. ಕಾಲಮಿತಿಯೊಳಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಗತ್ಯ ನೆರವು ಕಲ್ಪಿಸಲಿದೆ ಎಂದು ಗಡ್ಕರಿ ಅವರಿಗೆ ಇದೇ ವೇಳೆ ಸತೀಶ್ ಜಾರಕಿಹೊಳಿ ಅವರು ಭರವಸೆ ನೀಡಿದರು.