
ಯಡಿಯೂರಪ್ಪ, ವಿಜಯೇಂದ್ರ, ಆರಗ ಜ್ಞಾನೇಂದ್ರಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಕಿದ ಸವಾಲೇನು?
ಶಿವಮೊಗ್ಗ, ಫೆ. 24: ‘ಗ್ಯಾರಂಟಿ ಯೋಜನೆಗಳು 420 ಎಂದು ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಹೇಳುತ್ತಾರೆ. 420 ಕಾರ್ಯಕ್ರಮಗಳ ಹಣ ಪಡೆದುಕೊಳ್ಳದಂತೆ ಯಡಿಯೂರಪ್ಪ, ವಿಜಯೇಂದ್ರ ಅವರು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಡಲಿ ನೋಡೊಣ. ಆದರೆ ಓರ್ವ ಮಹಿಳೆಯು ಹಣ ವಾಪಾಸ್ ಕೊಡುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ಧೇಶಿಸಿ ಅವರು ಮಾತನಾಡಿದರು.
‘ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಗ್ಯಾರಂಟಿ ಕಾರ್ಯಕ್ರಮಗಳನ್ನು 420 ಎಂದು ಕರೆದಿದ್ದಾರೆ. ಜ್ಞಾನೇಂದ್ರ ನಿನಗೆ ಜ್ಞಾನವಿದೆಯಾ? ಅರ್ಧ ಜ್ಞಾನವಿದೆ’ ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಯಾವುದೇ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಿಲ್ಲ. ಈಗ ಮೋದಿ ಗ್ಯಾರಂಟಿ, ಮೋದಿ ಗ್ಯಾರಂಟಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಕೊಟ್ಟಿದ್ದು ಒಂದು ಸೀರೆ, ಸೈಕಲ್ ಮಾತ್ರ. ಬಡವರ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಮಾಡಲಿಲ್ಲ. ಬಡವರ ಶ್ರೇಯೋಭಿವೃದ್ದಿಗೆ ಯಾವುದೇ ಯೋಜನೆ ಜಾರಿಗೊಳಿಸಲಿಲ್ಲ. ಇದೀಗ ಬರೀ ಖಾಲಿ ಮಾತನಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು. .
ಸ್ಥಗಿತವಾಗುವುದಿಲ್ಲ : ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಟೀಕಿಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದೆಲ್ಲ ಹೇಳುತ್ತಿದ್ದಾರೆ. ಇಂತಹ ಸುಳ್ಳು ಮಾತುಗಳಿಗೆ ಕಿವಿಗೊಡಬೇಡಿ. ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ಸ್ಥಗಿತವಾಗುವುದಿಲ್ಲ. ಮುಂದಿನ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಗ್ಯಾರಂಟಿ ಯೋಜನೆಗಳು ಎಂದಿಗೂ ನಿಲ್ಲುವುದಿಲ್ಲವಾಗಿದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.
ಬಡತನ ನಿರ್ಮೂಲನೆ : ನೀತಿಯುತ ಯೋಜನೆಗಳ ಮೂಲಕ ಬಡತನ ನರ್ಮೂಲನೆ ಮಾಡಿ, ಭದ್ರತೆ ಒದಗಿಸುವುದು ನಮ್ಮ ಸರ್ಕಾರದ ಹೋರಾಟವಾಗಿದೆ. ಜಾತಿಯ ಆಧಾರದಲ್ಲಿ ಅಲ್ಲ. ಬದಲಾಗಿ ನೀತಿಯ ಆಧಾರದಲ್ಲಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಚುನಾವಣಾ ಪೂರ್ವ ಸಮಿತಿಯನ್ನು ರಚಿಸಿ, ಗ್ಯಾರಂಟಿ ಕಾರ್ಡುಗಳನ್ನು ಮನೆ ಮನೆಗಳಿಗೆ ತಲುಪಿಸಿದಂತೆ ಸರ್ಕಾರ ರಚನೆಯಾದ ತಕ್ಷಣ ಯೋಜನೆಗಳನ್ನು ಜಾರಿ ಮಾಡಿ ನಡೆದಂತೆ ನುಡಿದಿದ್ದೇವೆ ಎಂದರು.
ಹೆಣ್ಣು ಕುಟುಂಬದ ಕಣ್ಣು. ಅವರ ಕುಟುಂದಲ್ಲಿ ಭಾಗ್ಯೋದಯವಾಗಲೆಂದು ಗೃಹಲಕ್ಷ್ಮಿ ಯೋಜನೆಯನ್ನು ಬೆಳಗಾವಿಯಲ್ಲಿ ಚಾಲನೆ ನೀಡಿ, ಇದುವರೆಗೆ 1 ಕೋಟಿ 10 ಲಕ್ಷ, ಮಹಿಳೆಯರಿಗೆ ರೂ.2000 ಭತ್ಯೆ ನೀಡಲಾಗಿದ್ದು ರಾಷ್ಟ್ರದಲ್ಲೆ ಇದೊಂದು ಇತಿಹಾಸ.
ಗೃಹಜ್ಯೋತಿ ಯೋಜನೆಯಡಿ ಇದುವರೆಗೆ 1.5 ಕೋಟಿ ಜನರಿಗೆ ಉಚಿತ 200 ಯುನಿಟ್ ವಿದ್ಯುತ್ ನೀಡಲಾಗಿದೆ. ಅನ್ನ ಭಾಗ್ಯ ಯೋಜನೆಯಡಿ 5 ಕೆ ಜಿ ಜೊತೆ ಇನ್ನುಳಿದ ಐದು ಕೆಜಿ ಅಕ್ಕಿ ಬದಲು ಪ್ರತಿ ಸದಸ್ಯರಿಗೆ ಒಂದು ಕೆಜಿಗೆ ರೂ.34 ರಂತೆ ನೀಡಲಾಗುತ್ತಿದೆ.
ಪ್ರಸ್ತುತ ಬೆಲೆ ಏರಿಕೆ ಸಂಕಷ್ಟದಲ್ಲಿ ಸರ್ಕಾರ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಿದೆ. ಹಾಗೂ ಪ್ರಸ್ತುತ ಹೊಸದಾಗಿ 1000 ಬಸ್ ಖರೀದಿ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಈ ಬಜೆಟ್ ನಲ್ಲಿ 50 ಸಾವಿರ ಕೊಟಿ ಮೀಸಲು ಇಡಲಾಗಿದೆ ಎಂದು ಹೇಳಿದರು.