
ದುರಸ್ತಿಗೀಡಾದ ಸರ್ಕಾರಿ ಬಸ್ : ಪ್ರಯಾಣಿಕರಿಗೆ ನೆರವಾದ ಶಿವಮೊಗ್ಗ ಸಂಸದ!
ಶಿವಮೊಗ್ಗ, ಫೆ. 25: ದುರಸ್ತಿಯಿಂದ ರಸ್ತೆಯಲ್ಲಿ ನಿಂತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ (KSRTC bus) ಪ್ರಯಾಣಿಕರಿಗೆ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (b y raghavendra) ಅವರು ನೆರವಿಗೆ ಧಾವಿಸಿದ ಘಟನೆ ಭಾನುವಾರ ಸಾಗರ ತಾಲೂಕಿನಲ್ಲಿ ನಡೆದಿದೆ.
ಬೆಂಗಳೂರಿನಿಂದ ಕುಮಟಾಗೆ ಸಂಚರಿಸುತ್ತಿದ್ದ ಶಿರಸಿ ಉಪ ವಿಭಾಗಕ್ಕೆ ಸೇರಿದ ಸರ್ಕಾರಿ ಬಸ್, ಶಿವಮೊಗ್ಗದ ತ್ಯಾವರೆಕೊಪ್ಪ ಸಮೀಪ ದುರಸ್ತಿಗೀಡಾಗಿ ರಸ್ತೆಯಲ್ಲಿ ನಿಂತುಕೊಂಡಿತ್ತು. ಇದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.
ಇದೇ ವೇಳೆ ಶಿವಮೊಗ್ಗದಿಂದ ಸಾಗರಕ್ಕೆ ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ತೆರಳುತ್ತಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು, ಸರ್ಕಾರಿ ಬಸ್ ನಿಂತುಕೊಂಡಿದ್ದನ್ನು ಗಮನಿಸಿದ್ದಾರೆ. ಕಾರಿನಿಂದ ಇಳಿದು ಬಸ್ ಚಾಲಕ, ನಿರ್ವಾಹಕರ ಬಳಿ ಕಾರಣ ಕೇಳಿದ್ದಾರೆ.
ಬಸ್ ದುರಸ್ತಿಗೀಡಾದ ಮಾಹಿತಿ ಅರಿತ ಸಂಸದರು, ತಮ್ಮ ಮೊಬೈಲ್ ಫೋನ್ ಮೂಲಕ ಕೆ.ಎಸ್.ಆರ್.ಟಿ.ಸಿ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣ (ಡಿಸಿ) ಅಧಿಕಾರಿ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ. ಬಸ್ ದುರಸ್ತಿಗೆ ಕ್ರಮಕೈಗೊಂಡು ಪ್ರಯಾಣಿಕರಿಗೆ ನೆರವಾಗುವಂತೆ ತಿಳಿಸಿದ್ದರು.
ಅದರಂತೆ ಕೆ.ಎಸ್.ಆರ್.ಟಿ.ಸಿ ಡಿಸಿ ವಿಜಯ್ ಕುಮಾರ್ ಅವರು ತಮ್ಮ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಬಸ್ ದುರಸ್ತಿಗೊಳಿಸಿದ್ದಾರೆ. ತದನಂತರ ಬಸ್ ಕುಮಟಾದತ್ತ ಪ್ರಯಾಣ ಬೆಳೆಸಿದೆ.