Recognition of immorality increase in corruption 'Greed is the root of corruption': Retired Lokayukta Santosh Hegde ಅನೈತಿಕತೆಗೆ ಮನ್ನಣೆ ಭ್ರಷ್ಟಾಚಾರದ ಹೆಚ್ಚಳ ‘ದುರಾಸೆಯೇ ಭ್ರಷ್ಟಾಚಾರದ ಮೂಲ’ : ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ

‘ದುರಾಸೆಯೇ ಭ್ರಷ್ಟಾಚಾರದ ಮೂಲ’ : ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ

ಶಂಕರಘಟ್ಟ (ಶಿವಮೊಗ್ಗ), ಫೆ. 27: ಇಂದು ಶ್ರೀಮಂತರಾಗಲು ಎಲ್ಲರೂ ಬಯಸುತ್ತಾರೆ, ಹಣವಂತರಿಗೆ ಗೌರವ ನೀಡುತ್ತಾರೆ. ಆದರೆ ನೈತಿಕ ಹಾದಿಯಲ್ಲಿ  ಸಿರಿವಂತರಾಗಿದ್ದಾರೆಯೇ ಎಂಬ ಬಗ್ಗೆ ಯಾರಿಗೂ ಗಮನವಿಲ್ಲವಾಗಿರುವುದು, ಅನೈತಿಕರಿಗೆ ಮನ್ನಣೆ ದೊರೆಯುತ್ತಿರುವುದು ಭ್ರಷ್ಟಾಚಾರ ಸರ್ವತ್ರವಾಗಲು ಕಾರಣ ಎಂದು ನಿವೃತ್ತ ನ್ಯಾಯಮೂರ್ತಿ ಮತ್ತು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆ ಮಂಡ್ಯ ಜಿಲ್ಲಾ ಘಟಕಗಳು ಜಂಟಿ ಸಹಯೋಗದಲ್ಲಿ ಕುವೆಂಪು ವಿವಿಯ ಬಸವ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿಶ್ವ ಸಾಮಾಜಿಕ ನ್ಯಾಯ ಮತ್ತು ಹೆಣ್ಣುಮಕ್ಕಳ ಹಕ್ಕುಗಳು: ಕಾನೂನು ಅರಿವು’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದುರಾಸೆ, ಭ್ರಷ್ಟಾಚಾರ ಮಾಡಿ ಸಂಪತ್ಭರಿತರಾದವರು ಇನ್ನಷ್ಟು ಲಂಚ ಪಡೆಯುವುದು, ಸೋಮಾರಿತನ ಬೆಳೆಸುವುದು, ಅಧಿಕಾರ ಕೊಂಡುಕೊಳ್ಳುವುದು ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು.

ಮಾನವನ ದುರಾಸೆಯ ಕಾರಣದಿಂದಾಗಿ ದೇಶದ ಹತ್ತಾರು ಲಕ್ಷ ಕೋಟಿಗಳ ಹಣ ಕೊಳ್ಳೆ ಹೊಡೆಯಲಾಗುತ್ತಿದೆ. 1950 ನೇ ದಶಕದಿಂದ ಇಲ್ಲಿಯವರೆಗೂ ಜೀಪ್, ಬೋಫೋರ್ಸ್, ಕಾಮನ್ವೆಲ್ತ್ ಕ್ರೀಡಾಕೂಟ, ಕಲ್ಲಿದ್ದಲು ಮತ್ತು 2ಜಿ ಹಗರಣಗಳು ದೇಶವನ್ನು ಬಡವಾಗಿಸಿವೆ. ಇಂದಿಗೂ ಇದೇ ಸ್ಥಿತಿ ಮುಂದುವರಿದಿದೆ. ಹೀಗಾಗಿ ಹಣದುಬ್ಬರ, ದಿನಬಳಕೆ ವಸ್ತುಗಳ ದರ ಏರಿಕೆ, ಅನೀತಿಗಳು ಹೆಚ್ಚಾಗಿವೆ. ಯುವಸಮುಹ, ವಿದ್ಯಾರ್ಥಿಗಳು ಅನೈತಿಕ ಹಾದಿ ಹಿಡಿದವರ ಬಗ್ಗೆ ಸೂಕ್ಷ್ಮಾವಾಗಿರಬೇಕು ಎಂದು ಸಲಹೆಯಿತ್ತರು.

ಬೆಂಗಳೂರು ನಗರ  ಉಪ ಪೊಲೀಸ್ ಆಯುಕ್ತ ಎಸ್ ಸಿದ್ಧರಾಜು ಮಾತನಾಡಿ, ಶಿಕ್ಷಣ ಪಡೆದ ನಂತರ ಅದನ್ನು ಸಾಮಾಜಿಕ ಒಳಿತಿಗಾಗಿ ಬಳಸುವುದು ಮುಖ್ಯ. ಇಲ್ಲವಾದಲ್ಲಿ ದೇಶದಲ್ಲಿ ನೈಜ ಬದಲಾವಣೆ ಆಗುವುದಿಲ್ಲ.  ಯುವಜನರಿಗೆ ಅವಕಾಶಗಳು ದೊರೆಯದೆ ಅನುತ್ಪಾದಕತೆಯತ್ತ ಸಾಗಬೇಕಾಗುತ್ತದೆ.  ಧಾರ್ಮಿಕ ವಿಷಯಗಳಿಗಿಂತ ಸಾಮಾಜಿಕ, ಶೈಕ್ಷಣಿಕ ಅಗತ್ಯಗಳು ಮುಖ್ಯವಾದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊ ಎಸ್ ವೆಂಕಟೇಶ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಮಂಜುನಾಥ್ ನಾಯಕ್,  ವಿವಿಯ ಕುಲಸಚಿವರು ವಿಜಯಕುಮಾರ್ ಹೆಚ್ ಬಿ , ಪರೀಕ್ಷಾಂಗ ಕುಲಸಚಿವರು ಎಸ್ ಎಂ ಗೋಪಿನಾಥ್, ಹಣಕಾಸು ಅಧಿಕಾರಿ ಜಿ ಬಂಗಾರಪ್ಪ ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.

ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಬೀ ಜಿ ಶಿವಮೂರ್ತಿ, ಬೆಂಗಳೂರು ನಗರ ಪೊಲೀಸ್ ಉಪ ಆಯುಕ್ತರು ಎಸ್ ಸಿದ್ಧರಾಜು, ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆಯ ಅಧ್ಯಕ್ಷೆ ರಜನಿರಾಜ್, ಮಹಿಳಾ ಹಕ್ಕುಗಳ ಅರಿವು ಕಾರ್ಯಕರ್ತೆ ಕೀರ್ತನ ಅವರುಗಳು ಮಹಿಳೆಯರು, ವಿದ್ಯಾರ್ಥಿನಿಯರಿಗೆ ಅಗತ್ಯವಿರುವ ಕಾನೂನಿನ ತಿಳುವಳಿಕೆ, ಹಕ್ಕು, ಸವಲತ್ತು, ಜವಾಬ್ದಾರಿಗಳ ಕುರಿತು ಉಪ್ಯನ್ಯಾಸ ನೀಡಿ ಮಾತನಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಶಿವಮೊಗ್ಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ ಎನ್ ಚಂದನ್ ಮಾತನಾಡಿ, ಬಾಲಕಿಯರು, ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ನೆರೆಹೊರೆಯವರಿಂದಲೇ ಅತಿಹೆಚ್ಚಿನ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಬಾಲ್ಯದಿಂದಲೇ ಅವರಿಗೆ ದೌರ್ಜನ್ಯ ರಕ್ಷಣೆಯ ಅರಿವು ನೀಡುವುದು ಮುಖ್ಯ. ಪೋಕ್ಸೋ ಅಪರಾಧದ ಸಮಸ್ಯೆ ಅಧಿಕವಾದ ಕಾರಣ ಅಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಮೀಸಲಾದ ಎರಡು ವಿಶೇಷ ಕೋರ್ಟುಗಳು ಶಿವಮೊಗ್ಗದಲ್ಲಿ ಇವೆ. ಅಗತ್ಯವಿರುವ ಎಲ್ಲ ಮಹಿಳೆಯರಿಗೆ, ಆಸಿಡ್ ದಾಳಿಗೆ ಒಳಗಾದವರಿಗೆ ನ್ಯಾಯ ಪಡೆಯಲು ಉಚಿತ ಕಾನೂನಿನ ನೆರವು ನೀಡುವ ಕೆಲಸವನ್ನು ಪ್ರಾಧಿಕಾರದ ವತಿಯಿಂದ ಮಾಡಲಾಗುತ್ತಿದೆ ಎಂದರು.

Self-declaration of 'unemployed' 'not continuing studies' 'not self-employed' is mandatory : otherwise the allowance will be suspended..! #ಯುವನಿಧಿ, #yuvanidhi, ‘ನಿರುದ್ಯೋಗಿ’, ‘ವ್ಯಾಸಂಗ ಮುಂದುವರೆಸುತ್ತಿಲ್ಲ’, ‘ಸ್ವಯಂ ಉದ್ಯೋಗಿಯಲ್ಲ’ ಎಂಬ ಸ್ವಯಂ ಘೋಷಣೆ ಕಡ್ಡಾಯ : ಇಲ್ಲದಿದ್ದರೆ ಬಂದ್ ಆಗಲಿದೆ ಭತ್ಯೆ..! Previous post ‘ನಿರುದ್ಯೋಗಿ’, ‘ವ್ಯಾಸಂಗ ಮುಂದುವರೆಸುತ್ತಿಲ್ಲ’, ‘ಸ್ವಯಂ ಉದ್ಯೋಗಿಯಲ್ಲ’ ಎಂಬ ಸ್ವಯಂ ಘೋಷಣೆ ಕಡ್ಡಾಯ : ಇಲ್ಲದಿದ್ದರೆ ಬಂದ್ ಆಗಲಿದೆ ಭತ್ಯೆ..!
Strict action if Pakistan Zindabad slogan is true: CM ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜವಾದರೆ ಕಠಿಣ ಕ್ರಮ : ಸಿಎಂ Next post ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜವಾದರೆ ಕಠಿಣ ಕ್ರಮ : ಸಿಎಂ