
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜವಾದರೆ ಕಠಿಣ ಕ್ರಮ : ಸಿಎಂ
ಬೆಂಗಳೂರು , ಫೆಬ್ರವರಿ 28: ‘ಎಫ್. ಎಸ್ .ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ಬಂದ ನಂತರ ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ, ಈ ಬಗ್ಗೆ ಗಂಭೀರ ಕ್ರಮ ವಹಿಸಲಾಗುವುದು. ಪಾಕಿಸ್ತಾನದ ಪರವಾಗಿ ಘೋಷಣೆ ನಿಜವೇ ಆಗಿದ್ದರೆ, ಅಂತವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರು ವಿಧಾನಸೌಧದಲ್ಲಿ ಇಂದು ಮಾಧ್ಯಮದರೊಂದಿಗೆ ಮಾತನಾಡಿದರು. ರಾಷ್ಟ್ರದ ವಿರುದ್ಧ ಘೋಷಣೆ ಕೂಗಿರುವುದು ಸಾಬೀತಾದರೆ ಯಾರೇ ಆಗಲಿ ಕಠಿಣ ಕ್ರಮ ವಹಿಸಲಾಗುವುದು ಎಂದರು. ವಿಧಾನಸೌಧದಲ್ಲಿ ಈ ಘಟನೆ ಆಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ‘ಕೂಗುವವರಿಗೆ ಇಲ್ಲಿಯಾದರೇನು, ಎಲ್ಲಾದರೇನು? ನಿಜ ಆಗಿದ್ದರೆ ಕಠಿಣ ಕ್ರಮ ಆಗುತ್ತದೆ’ ಎಂದರು.
ಏನೀದು ಪ್ರಕರಣ?: ಮಂಗಳವಾರ ರಾಜ್ಯಸಭೆ ಚುನಾವಣೆ ಮತ ಎಣಿಕೆ ಫಲಿತಾಂಶ ಹೊರಬಿದ್ದ ನಂತರ ಸಂಭ್ರಮಾಚರಣೆ ನಡೆಸುತ್ತಿದ್ದ ವೇಳೆ, ಕಾಂಗ್ರೆಸ್ ವಿಜೇತ ಅಭ್ಯರ್ಥಿ ನಾಸೀರ್ ಹುಸೇನ್ ಅವರ ಕೆಲ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ ಆರೋಪ ಕೇಳಿಬಂದಿದೆ.
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪಕ್ಕೆ ಸಂಬಂಧಿಸಿದಂತೆ, ವೀಡಿಯೋ ತುಣುಕುಗಳನ್ನು ಪೊಲೀಸರು ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್.ಎಸ್.ಎಲ್) ಪರಿಶೀಲನೆಗೆ ರವಾನಿಸಲಾಗಿದೆ. ಜೊತೆಗೆ ಘಟನೆಯ ಕುರಿತಂತೆ ತನಿಖೆ ನಡೆಸಲು ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.