
ರಣ ಬಿಸಿಲಿಗೆ ಮಲೆನಾಡು ಹೈರಾಣು : ನೀರು, ಮೇವಿಗೆ ಪರದಾಡುತ್ತಿರುವ ಜಾನುವಾರುಗಳು..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ, ದಿನ ಕಳೆದಂತೆ ಬಿಸಿಲ ಬೇಗೆ ಹೆಚ್ಚಾಗಲಾರಂಭಿಸಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ನಾಗರೀಕರನ್ನು ಹೈರಾಣಾಗಿಸಿದೆ. ಎದುಸಿರು ಬಿಡುವಂತೆ ಮಾಡಿದೆ!
ಮುಂಗಾರು ಮಳೆ ಕೈಕೊಟ್ಟ ಪರಿಣಾಮದಿಂದ ಜಿಲ್ಲೆಯಾದ್ಯಂತ ಭೀಕರ ಬರ ಸ್ಥಿತಿ ಆವರಿಸಿದೆ. ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಲಾರಂಭಿಸಿವೆ. ಜೀವ ಜಲಕ್ಕೆ ಹಾಹಾಕಾರ ಎದುರಾಗಲಾರಂಭಿಸಿದೆ. ಈ ನಡುವೆ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಉಷ್ಣಾಂಶ ಏರಿಕೆಯಾಗುತ್ತಿದೆ.
‘ಇತ್ತೀಚೆಗೆ ಬೆಳಿಗ್ಗೆಯಿಂದ ಸಂಜೆಯವರೆಗೂ ರಣ ಬಿಸಿಲು ಬೀಳುತ್ತಿದೆ. ಮಧ್ಯಾಹ್ನದ ವೇಳೆ ಹೊರಗೆ ಕಾಲಿಡಲು ಆಗದಷ್ಟು ತಾಪವಿರುತ್ತದೆ. ಡಾಂಬರು ರಸ್ತೆಗಳು ಕಾದ ಕಾವಲಿಯಂತೆ ಪರಿವರ್ತಿತವಾಗುತ್ತಿವೆ. ಈಗಲೇ ಈಗಾದರೆ, ಏಪ್ರಿಲ್ – ಮೇ ತಿಂಗಳಲ್ಲಿ ತಾಪಮಾನದ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಆತಂಕವಿದೆ’ ಎಂದು ನಾಗರೀಕರು ಹೇಳುತ್ತಾರೆ.
ತಣ್ಣನೆ ವಾತಾವರಣಕ್ಕೆ ಹೆಸರಾದ ಮಲೆನಾಡಿನಲ್ಲಿ, ಇತ್ತೀಚಿನ ವರ್ಷಗಳಲ್ಲಿ ಬಯಲು ಸೀಮೆ ಜಿಲ್ಲೆಗಳಲ್ಲಿ ಕಂಡುಬರುವ ಬಿರು ಬಿಸಿಲು ಕಂಡುಬರುತ್ತಿದೆ. ಇದಕ್ಕೆ ಕ್ಷಿಪ್ರಗತಿಯಲ್ಲಿ ನಾಶವಾಗುತ್ತಿರುವ ಅರಣ್ಯ ಪ್ರದೇಶದಿಂದ ಹವಾಮಾನದಲ್ಲಿ ಉಂಟಾಗುತ್ತಿರುವ ವೈಪರೀತ್ಯ ಕಾರಣವಾಗಿದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಡುತ್ತಾರೆ.
ಮೂಕಪ್ರಾಣಿಗಳ ಸಂಕಷ್ಟ : ಮತ್ತೊಂದೆಡೆ, ಮೂಕಪ್ರಾಣಿಗಳ ದಾಹ ತಣಿಸುವ ತಾಣವಾಗಿದ್ದ ಕೆರೆಕಟ್ಟೆಗಳು ನೀರಿಲ್ಲದೆ ತಳ ಕಾಣಲಾರಂಭಿಸಿವೆ. ಹಾಗೆಯೇ ಜಾನುವಾರುಗಳ ಹಸಿವು ಇಂಗಿಸುವ ಹಸಿರು ಕೂಡ ಒಣಗಿ ಹೋಗಲಾರಂಭಿಸಿದೆ.
ಇದರಿಂದ ಮೇವು, ನೀರಿಗಾಗಿ ಜಾನುವಾರುಗಳು ಒಂದೆಡೆಯಿಂದ ಮತ್ತೊಂದೆಡೆ ಅಲೆದಾಡುತ್ತಿವೆ. ದಾಹ-ಹಸಿವು ನೀಗಿಸಿಕೊಳ್ಳಲು ಮೂಕಪ್ರಾಣಿಗಳು ಪಡುತ್ತಿರುವ ಪರಿತಾಪ ಹೇಳತೀರದಾಗಿದೆ. ದಷ್ಟಪುಷ್ಠವಾಗಿ ಕಂಗೊಳ್ಳಿಸುತ್ತಿದ್ದ ಜಾನುವಾರುಗಳು, ಇದೀಗ ಬಡಕಲಾಗುತ್ತಿವೆ. ಮೈಮೂಳೆಗಳು ಕಾಣಲಾರಂಭಿಸಿವೆ. ನಿಶ್ಯಕ್ತಿ ಸೇರಿದಂತೆ ನಾನಾ ರೋಗ-ರುಜುನಗಳಿಗೂ ತುತ್ತಾಗುವಂತಾಗಿದೆ.
ಬಿಸಿಲ ತಾಪಕ್ಕೆ ಹಸಿರು ಹುಲ್ಲು ಒಣಗಿ ಹೋಗಿದೆ. ಇದರಿಂದ ಹಸಿವು ಇಂಗಿಸಿಕೊಳ್ಳಲು ಜಾನುವಾರುಗಳು ಪ್ಲಾಸ್ಟಿಕ್, ಪೇಪರ್ ನಂತಹ ವಸ್ತುಗಳನ್ನು ತಿನ್ನುತ್ತಿರುವ ದಾರುಣ ದೃಶ್ಯಗಳು ನಗರ-ಪಟ್ಟಣ ಪ್ರದೇಶ ಮಾತ್ರವಲ್ಲದೆ, ಗ್ರಾಮೀಣ ಭಾಗಗಳಲ್ಲಿಯೂ ಕಂಡುಬರುತ್ತಿದೆ.