
‘ಬಿಜೆಪಿಯಿಂದ ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ’ : ಸಿಎಂ
ಬೆಂಗಳೂರು ಫೆ. 29: ‘ಆರ್.ಎಸ್.ಎಸ್.ನವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದಾಗಲೂ ಸಂಘ ಪರಿವಾರದ ಹೆಡಗೇವಾರ್ ಆಗಲಿ, ಗೋಲ್ವಾಲ್ಕರ್ ಆಗಲಿ ಪಾಲ್ಗೊಂಡಿಲ್ಲ. ಬಿಜೆಪಿ ಯಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವವರು ಬಿಜೆಪಿಯವರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವುದು ಕೇವಲ ಬಾಯಿ ಮಾತು. ಇಂಥವರು ದೇಶವನ್ನು ಆಳಲು ಲಾಯಕ್ಕೇ’ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ಸೋಲಿಸಲಿದ್ದಾರೆ. ವಿರೋಧ ಪಕ್ಷದ ಅಧಿಕಾರ ನೀಡುತ್ತಾರೆ ಎಂದು ನುಡಿದರು.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಕಾಂಗ್ರೆಸ್ ಪರವಾಗಿದ್ದುದ್ದನ್ನು ಮರೆಮಾಚಲು ವಿಧಾನ ಸಭೆಯಲ್ಲಿ ಗದ್ದಲ ಎಬ್ಬಿಸಿದ್ದಾರೆ ಎಂದರು.
ಪೈಪೋಟಿ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚರ್ಚೆಯಲ್ಲಿ 30% ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ. ಜೆಡಿಎಸ್ ಕೂಡ ಪೈಪೋಟಿಗೆ ಬಿದ್ದಂತೆ ಅದನ್ನೇ ಮಾಡಿದೆ ಎಂದರು.
ಜೆಡಿಎಸ್ ತಮ್ಮ ಪಕ್ಷದ ಹೆಸರಿನಲ್ಲಿರುವ “ಎಸ್” ನ್ನು ತೆಗೆದುಹಾಕುವುದು ಉತ್ತಮ. ಏಕೆಂದರೆ ಅದು ಈಗ ಜಾತ್ಯತೀತ ವಾಗಿ ಉಳಿದಿಲ್ಲ ಎಂದು ಕುಟುಕಿದರು.