
ನಟ, ರಾಜಕಾರಣಿ, ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಮ್ ವಿಧಿವಶ
ಬೆಂಗಳೂರು, ಫೆ. 29: ಹೃದಯಾಘಾತದಿಂದ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಐಎಎಸ್ ಅಧಿಕಾರಿ, ಚಿತ್ರನಟ ಹಾಗೂ ರಾಜಕಾರಣಿ ಕೆ.ಶಿವರಾಂ (71) ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ವಿಧಿವಶರಾಗಿದ್ದಾರೆ.
ಬುಧವಾರ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ.
ಕೆ.ಶಿವರಾಮ್ (cinema actor k.shivaram) ಅವರ ನಿಧನಕ್ಕೆ ವಿವಿಧ ಪಕ್ಷಗಳ ರಾಜಕೀಯ ನಾಯಕರು, ಸಿನಿಮಾ ನಟರು ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮೋದಿ ರಸ್ತೆಯಲ್ಲಿರುವ ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕನ್ನಡದಲ್ಲೇ ಪರೀಕ್ಷೆ : ಮೊಟ್ಟ ಮೊದಲ ಬಾರಿಗೆ ಕೆ.ಶಿವರಾಮ್ ಅವರು ಕನ್ನಡದಲ್ಲಿಯೇ ಐಎಎಸ್ (ias) ಪರೀಕ್ಷೆ ಬರೆದು ತೇರ್ಗಡೆಯಾಗಿದ್ದರು. ಈ ಮೂಲಕ ಕನ್ನಡದಲ್ಲಿಯೇ ಪರೀಕ್ಷೆ ಬರೆದು ತೇರ್ಗಡೆಯಾದ ಮೊಟ್ಟಮೊದಲ ಐಎಎಸ್ ಅಧಿಕಾರಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು.
ಚಿತ್ರರಂಗದ ನಂಟು : ಕೆ ಶಿವರಾಮ್ ಅವರು ಹಲವು ಕನ್ನಡ ಸಿನಿಮಾ (kannada film) ಗಳಲ್ಲಿ ನಟಿಸಿದ್ದಾರೆ. 1993 ರಲ್ಲಿ ತೆರೆಗೆ ಬಂದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದಲ್ಲಿ ಕೆ ಶಿವರಾಮ್ ಅಭಿನಯಿಸಿದ್ದರು. ಈ ಚಿತ್ರ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು.
ತದನಂತರ ‘ವಸಂತ ಕಾವ್ಯ’, ‘ಗೇಮ್ ಫಾರ್ ಲವ್’, ‘ಟೈಗರ್’, ‘ಸಾಂಗ್ಲಿಯಾನಾ ಪಾರ್ಟ್ 3’, ‘ಪ್ರತಿಭಟನೆ’, ‘ಯಾರಿಗೆ ಬೇಡ ದುಡ್ಡು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ರಾಜಕಾರಣದ ನಂಟು : 2013 ರಲ್ಲಿ ಐಎಎಸ್ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಬಳಿಕ 2013 ರಲ್ಲಿ ಕೆ ಶಿವರಾಮ್ ಕಾಂಗ್ರೆಸ್ ಪಕ್ಷ (congress party) ಸೇರ್ಪಡೆಯಾಗಿದ್ದರು. 2014 ರಲ್ಲಿ ಜೆಡಿಎಸ್ ಪಕ್ಷ (jds party) ಸೇರಿ ಬಿಜಾಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು. ನಂತರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ, ತದನಂತರ ಬಿಜೆಪಿ ಪಕ್ಷ (bjp party) ಸೇರ್ಪಡೆಯಾಗಿದ್ದರು.
ಶಿವಮೊಗ್ಗ ಜಿಪಂನಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ ಮಾಡಿದ್ದ ಕೆ.ಶಿವರಾಮ್
*** ಕೆ.ಶಿವರಾಂ ಅವರು 24-12-1996 ರಿಂದ 29-5-1997 ರವರೆಗೆ ಶಿವಮೊಗ್ಗ ಜಿಲ್ಲಾ ಪರಿಷತ್ (shimoga zp) ಮುಖ್ಯ ಕಾರ್ಯದರ್ಶಿಯಾಗಿ 6 ತಿಂಗಳ ಕಾಲ ಕಾರ್ಯನಿರ್ವಹಣೆ ಮಾಡಿದ್ದರು. ಗ್ರಾಮೀಣ ಕುಡಿಯುವ ನೀರು, ಅಭಿವೃದ್ದಿ ಕೆಲಸಕಾರ್ಯಗಳು, ಬಡವರಿಗೆ ವಸತಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಅವರ ಅವಧಿಯಲ್ಲಿ ಜಿಪಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರೋರ್ವರು ಮಾಹಿತಿ ನೀಡುತ್ತಾರೆ.