
ಮಂಗಳೂರು : ಕಡಬದ ಪಿಯು ಕಾಲೇಜ್ ಆವರಣದಲ್ಲಿಯೇ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ – ದುಷ್ಕರ್ಮಿಯ ಬಂಧನ!
ಕಡಬ (ಮಂಗಳೂರು), ಮಾ. 4: ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ಕಾರಿಡಾರ್ ನಲ್ಲಿಯೇ ಮೂವರು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಮೇಲೆ, ದುಷ್ಕರ್ಮಿಯೋರ್ವ ಆಸಿಡ್ ದಾಳಿ ನಡೆಸಿರುವ ಭೀಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಮಾ. 4 ರ ಸೋಮವಾರ ಬೆಳಿಗ್ಗೆ ನಡೆದಿದೆ.
ಇದರಲ್ಲಿ ಓರ್ವ ವಿದ್ಯಾರ್ಥಿನಿಗೆ ಗಂಭೀರ ಸ್ವರೂಪದ ಸುಟ್ಟ ಗಾಯವಾಗಿದೆ. ಮೂವರನ್ನು ಕಡಬ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಕೇರಳ ರಾಜ್ಯದ ಮಲಪ್ಪುರಂನ ಅಬೀನ್ (23) ಆಸಿಡ್ ಎರಚಿದ ಆರೋಪಿ ಎಂದು ಗುರುತಿಸಲಾಗಿದೆ. ಈತ ಎಂಬಿಎ ವಿದ್ಯಾರ್ಥಿಯಾಗಿದ್ದಾನೆ ಎಂದು ಹೇಳಲಾಗಿದೆ. ಆಸಿಡ್ ಎರಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾಲೇಜ್ ನ ಕಾರಿಡಾರ್ ಆವರಣದಲ್ಲಿ ಮೂವರು ವಿದ್ಯಾರ್ಥಿನಿಯರು ಕುಳಿತ್ತಿದ್ದ ವೇಳೆ, ಆರೋಪಿಯು ಮಾಸ್ಕ್ ಹಾಗೂ ಟೋಪಿ ಧರಿಸಿ ಆಗಮಿಸಿ ನಿರ್ದಿಷ್ಟ ವಿದ್ಯಾರ್ಥಿನಿಯ ಮೇಲೆ ಆಸಿಡ್ ಎರಚಿದ್ದಾನೆ. ಈ ವೇಳೆ ಸದರಿ ವಿದ್ಯಾರ್ಥಿನಿಯ ಪಕ್ಕದಲ್ಲಿ ಕುಳಿತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೂ ಆಸಿಡ್ ತಗುಲಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಪ್ರಾಥಮಿಕ ಹಂತದ ಮಾಹಿತಿ ಅನುಸಾರ, ಪ್ರೇಮ ವೈಫಲ್ಯ ಕಾರಣದಿಂದ ಅಬೀನ್ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಘಟನೆಯಿಂದ ಕಾಲೇಜ್ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು ಭಯಭೀತರಾಗುವಂತಾಗಿತ್ತು.
One thought on “ಮಂಗಳೂರು : ಕಡಬದ ಪಿಯು ಕಾಲೇಜ್ ಆವರಣದಲ್ಲಿಯೇ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ – ದುಷ್ಕರ್ಮಿಯ ಬಂಧನ!”
Comments are closed.
ivanigu ade riti madi,Amele adara novu estu anta gottagutte.