
ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಅಭಿಯಾನ : ಯಡಿಯೂರಪ್ಪ ಅಸಮಾಧಾನ !
ಶಿವಮೊಗ್ಗ, ಮಾ. 4: ಮುಂಬರುವ ಲೋಕಸಭೆ ಚುನಾವಣೆಯಲ್ಲಿ, ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡದಂತೆ ಸ್ಥಳೀಯ ಬಿಜೆಪಿಯ ಒಂದು ವರ್ಗ ನಡೆಸುತ್ತಿರುವ ‘ಗೋ ಬ್ಯಾಕ್ ಶೋಭಾ ಕರಂದ್ಲಾಜೆ’ ಅಭಿಯಾನಕ್ಕೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಶಿವಮೊಗ್ಗ ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಬಿಎಸ್ವೈ ಮಾತನಾಡಿದರು. ‘ಅಭಿಯಾನಕ್ಕೆ ಯಾವುದೇ ಅರ್ಥವಿಲ್ಲ. ದುರುದ್ದೇಶದಿಂದ ಮಾಡಲಾಗುತ್ತಿದೆ. ಅವರು ಮಾಡುತ್ತಿರುವ ಒಳ್ಳೆಯ ಕೆಲಸವನ್ನು ಸಹಿಸಲಾಗದೆ, ಆ ರೀತಿ ಮಾಡಲಾಗುತ್ತಿದೆ. ಅದಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವಾಗಿದೆ’ ಎಂದು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯ ಬಿಜೆಪಿಯ ಎರಡನೇ ಪಟ್ಟಿ ಶೀಘ್ರವೇ ಬಿಡುಗಡೆಯಾಗಲಿದೆ. ಯಾರಿಗೆ ಟಿಕೆಟ್ ನೀಡಬೇಕು ಎಂಬುವುದನ್ನು ಪಕ್ಷದ ಮುಖಂಡರು ನಿರ್ಧರಿಸಲಿದ್ದಾರೆ. ಸುಮಲತಾ ಅಂಬರೀಶ್ ಮಂಡ್ಯ ಸ್ಪರ್ಧೆ ವಿಚಾರವೂ ಕೂಡ ದೆಹಲಿಯಲ್ಲಿ ತೀರ್ಮಾನವಾಗಲಿದೆ ಎಂದರು.
ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಲ್ ವರದಿಯನ್ನು ಶೀಘ್ರವೇ ಸರ್ಕಾರ ಬಿಡುಗಡೆ ಮಾಡಬೇಕು. ಈ ನಿಟ್ಟಿನಲ್ಲಿ ವಿಳಂಬ ಮಾಡುತ್ತಿರುವುದು ಏಕೆಂಬುವುದು ಗೊತ್ತಾಗುತ್ತಿಲ್ಲ ಎಂದರು.
ರಾಮೇಶ್ವರ ಹೋಟೆಲ್ ಬಾಂಬ್ ಸ್ಫೋಟದ ಆರೋಪಿಗಳು ಯಾರೇ ಆಗಿರಲಿ ಅವರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು. ಸತ್ಯಾಂಶ ಏನೆಂಬುವುದನ್ನು ಬಹಿರಂಗಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.