
ಹಾವೇರಿ ಲೋಕಸಭಾ ಟಿಕೆಟ್ : ಪುತ್ರನ ಪರ ಕೆ.ಎಸ್.ಈಶ‍್ವರಪ್ಪ ಕೊನೆ ಹಂತದ ಹೋರಾಟ..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಮಾ. 9: ಕಳೆದ ವಿಧಾನಸಭೆ ಚುನಾವಣೆಯಲ್ಲಿ, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಪುತ್ರ ಕೆ.ಇ.ಕಾಂತೇಶ್’ಗೆ ಬಿಜೆಪಿ ಟಿಕೆಟ್ ಕೊಡಿಸಲು ಸಾಧ್ಯವಾಗದೆ ಬೇಸರಗೊಂಡಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಇದೀಗ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್ ಕೊಡಿಸಲು ಭಾರೀ ಕಸರತ್ತು ನಡೆಸಲಾರಂಭಿಸಿದ್ದಾರೆ!
ವರಿಷ್ಠ ನಾಯಕರ ಭರವಸೆಯಂತೆ, ಕೆ.ಎಸ್.ಈಶ್ವರಪ್ಪ ಹಾಗೂ ಅವರ ಪುತ್ರ ಕೆ.ಇ.ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಹಲವು ತಿಂಗಳುಗಳಿಂದ ಚುನಾವಣಾ ಸಿದ್ದತೆಯಲ್ಲಿ ತೊಡಗಿದ್ದರು. ಟಿಕೆಟ್ ಸಿಗುವ ದೃಢ ವಿಶ್ವಾಸದಲ್ಲಿದ್ದರು. ಬಹುತೇಕ ಟಿಕೆಟ್ ಖಚಿತ ಎಂದೇ ಹೇಳಲಾಗಿತ್ತು.
ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ, ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಲೆಕ್ಕಾಚಾರಗಳು ತಲೆಕೆಳಗಾಗುವಂತಾಗಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಪಕ್ಷದ ಅಭ‍್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ನಡುವೆ ಮಾಜಿ ಸಚಿವ ಬಿ.ಸಿ.ಪಾಟೀಲ್ ತಮಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಈ ಕಾರಣದಿಂದ ಕೆ.ಇ.ಕಾಂತೇಶ್ ಗೆ ಬಿಜೆಪಿ ಟಿಕೆಟ್ ದೊರಕಲಿದೆಯಾ? ಇಲ್ಲವೆ? ಎಂಬ ಕುತೂಹಲ ಬಿಜೆಪಿ ಪಾಳೇಯದಲ್ಲಿ ಮನೆಮಾಡಿದೆ. ಮತ್ತೊಂದೆಡೆ, ಪಕ್ಷದಲ್ಲಿನ ದಿಢೀರ್ ವಿದ್ಯಮಾನಗಳು ಕೆ.ಎಸ್.ಈಶ್ವರಪ್ಪ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಈ ಕಾರಣದಿಂದ ಶತಾಯಗತಾಯ ಪುತ್ರನಿಗೆ ಟಿಕೆಟ್ ಕೊಡಿಸಲು ಲಾಬಿ ಶುರು ಮಾಡಿದ್ದಾರೆ. ಈ ಮೊದಲು ನೀಡಿದ್ದ ಭರವಸೆಯಂತೆ, ಪುತ್ರನಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ಒತ್ತಡ ಹಾಕಲಾರಂಭಿಸಿದ್ದಾರೆ. ಒಂದು ವೇಳೆ ಪುತ್ರನಿಗೆ ಟಿಕೆಟ್ ಕೈ ತಪ್ಪಿದರೆ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುವ ಖಡಕ್ ಎಚ್ಚರಿಕೆಯ ಸಂದೇಶ ಕೂಡ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ರಾಜಕಾರಣ ದಿನದಿಂದ ದಿನಕ್ಕೆ ಕಾವೇರಲಾರಂಭಿಸಿದೆ. ಕೆ.ಎಸ್.ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಲಿದ್ದಾರಾ? ಇಲ್ಲವೇ? ಎಂಬುವುದು ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದು, ಮುಂದೇನಾಗಲಿದೆ ಎಂಬುವುದು ಕಾದು ನೋಡಬೇಕಾಗಿದೆ.
ಶಿವಮೊಗ್ಗದ ಮೇಲೆ ಪರಿಣಾಮ ಬೀರಲಿದೆಯೇ ಹಾವೇರಿ ಟಿಕೆಟ್ ಪಾಲಿಟಿಕ್ಸ್?
*** ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಾಲಿಟಿಕ್ಸ್ ದಿನಕ್ಕೊಂದು ತಿರುವು ಪಡೆಯಲಾರಂಭಿಸಿದೆ. ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಗೆ ಟಿಕೆಟ್ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕೆ.ಇ.ಕಾಂತೇಶ್ ಗೆ ಹಾವೇರಿ ಟಿಕೆಟ್ ಕೈ ತಪ್ಪಿದರೆ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರಾಜಕೀಯ ನಡೆ ಏನಾಗಲಿದೆ? ಎಂಬ ಚರ್ಚೆಗಳು ನಡೆಯಲಾರಂಭಿಸಿವೆ. ಹಾವೇರಿ ಬಿಜೆಪಿ ಟಿಕೆಟ್ ರಾಜಕಾರಣ ಶಿವಮೊಗ್ಗ ಬಿಜೆಪಿ ಪಾಳೇಯದ ಮೇಲೂ ಪರಿಣಾಮ ಬೀರುವ ಸಾಧ‍್ಯತೆಗಳು ಗೋಚರವಾಗುತ್ತಿವೆ.