
ರಾಜ್ಯದಲ್ಲಿಯೂ ನಿಷೇಧವಾಗಲಿದೆಯಾ ಗೋಬಿ ಮಂಚೂರಿ – ಬಾಂಬೆ ಮಿಠಾಯಿ?!
ಬೆಂಗಳೂರು, ಮಾ. 10: ಆರೋಗ್ಯಕ್ಕೆ ಹಾನಿಕಾರಕ ಅಂಶ ಒಳಗೊಂಡಿರುವ ಹಿನ್ನೆಲೆಯಲ್ಲಿ, ಗೋವಾ ರಾಜ್ಯದ ಮಾಪುಸ ನಗರಾಡಳಿತವು ಗೋಬಿ ಮಂಚೂರಿ ನಿಷೇಧಿಸಿತ್ತು. ಮತ್ತೊಂದೆಡೆ ತಮಿಳುನಾಡು ಹಾಗೂ ಪುದುಚೇರಿ ಸರ್ಕಾರಗಳು, ಬಾಂಬೆ ಮಿಠಾಯಿ ನಿಷೇಧಿಸಿತ್ತು. ಈ ನಡುವೆ ಕರ್ನಾಟಕ ರಾಜ್ಯದಲ್ಲಿ ಈ ಎರಡು ತಿನಿಸುಗಳು ನಿಷೇಧಕ್ಕೊಳಗಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ಎರಡು ತಿನಿಸುಗಳ ಕುರಿತಂತೆ ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಲಾಗಿದ್ದು, ಈಗಾಗಲೇ ಇದರ ವರದಿಯು ಆರೋಗ್ಯ ಇಲಾಖೆ ಕೈ ಸೇರಿದೆ. ಈ ಸಂಬಂಧ ಮಾ.11 ರ ಸೋಮವಾರ ಆರೋಗ್ಯ ಇಲಾಖೆ ಸಚಿವರು ಅದಿಕೃತ ಪ್ರಕಟಣೆ ಹೊರಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ರಾಜ್ಯದ ನೂರಾರು ಕಡೆ ಗೋಬಿ ಮಂಚೂರಿ ಮಾದರಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ತಪಾಸಣೆಗೊಳಪಡಿಸಿದೆ ಎಂದು ಹೇಳಲಾಗಿದೆ.
ಆರೋಗ್ಯ ಸಚಿವರು ಹೇಳಿದ್ದೇನು? : ‘ಗೋಬಿ ಮಂಚೂರಿ ಖಾದ್ಯದ ಬಗ್ಗೆ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿತ್ತು. ಅದರಂತೆ ಪರೀಕ್ಷೆ ನಡೆಸಲಾಗಿದ್ದು, ವರದಿ ಪರಿಶೀಲನೆ ನಡೆಸಿ ಸೋಮವಾರ ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗೂಂಡುರಾವ್ ಅವರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.
ನಿಷೇಧ : ಕ್ಯಾನ್ಸರ್’ಕಾರಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ, ಈಗಾಗಲೇ ತಮಿಳುನಾಡು ಹಾಗೂ ಪುದುಚೇರಿ ಸರ್ಕಾರಗಳು ಬಾಂಬೆ ಮಿಠಾಯಿ ಸಿಹಿ ತಿನಿಸನ್ನು ನಿಷೇಧಿಸಿವೆ. ಮತ್ತೊಂದೆಡೆ ಗೋವಾ ರಾಜ್ಯದ ಮಾಪುಸ ನಗರಾಡಳಿತವು, ಗೋಬಿ ಮಂಚೂರಿ ತಯಾರಿಕೆ ಹಾಗೂ ಮಾರಾಟವನ್ನು ನಿಷೇಧಿಸಿತ್ತು.