
ಕ್ರಿಕೆಟ್ ಪಿಚ್ ಮೇಲೆಯೇ ಮೂತ್ರ ವಿಸರ್ಜನೆ, ಮದ್ಯ – ಮಾಂಸ ಸೇವನೆ : ಕ್ರೀಡಾಪಟುಗಳ ಆಕ್ರೋಶ!
ಶಿವಮೊಗ್ಗ, ಮಾ. 11: ಶಿವಮೊಗ್ಗ ನಗರದ ಎನ್ಇಎಸ್ ಮೈದಾನ (shimoga nes ground) ದಲ್ಲಿ ಭಾನುವಾರ ನಡೆದ ಕುರಿ ಕಾಳಗ ಸ್ಪರ್ಧೆ ವೇಳೆ, ಕೆಲವರು ಮೈದಾನದಲ್ಲಿರುವ ಕ್ರಿಕೆಟ್ ತರಬೇತಿ (cricket training) ಸಂಸ್ಥೆಗಳ ಪಿಚ್ ಹಾಗೂ ನೆಟ್ ಗಳನ್ನು ಕಲುಷಿತಗೊಳಿಸಿರುವ ಘಟನೆ ನಡೆದಿದೆ.
ಪಿಚ್ (pitch) ಗಳ ಮೇಲೆಯೇ ಮದ್ಯದ ಬಾಟಲಿಗಳು (alcohol bottles), ಮಾಂಸದ ತುಂಡು, ಪ್ಲಾಸ್ಟಿಕ್, ಬಾಟಲಿ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ಹಾಗೆಯೇ ಪಿಚ್ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದರಿಂದ ಕ್ರಿಕೆಟ್ ತರಬೇತಿ ಸ್ಥಳದಲ್ಲಿ ದುರ್ನಾತ ಬೀರುತ್ತಿದೆ. ಪಿಚ್ ಸುತ್ತಲೂ ಹಾಕಿದ್ದ ನೆಟ್ ಗಳನ್ನು ಕಿತ್ತು ಹಾಕಲಾಗಿದೆ ಎಂದು ಕ್ರಿಕೆಟ್ ಪಟುಗಳು ದೂರಿದ್ದಾರೆ.
ಸೋಮವಾರ ಬೆಳಿಗ್ಗೆಎಂದಿನಂತೆ ಕ್ರಿಕೆಟ್ ಪಟುಗಳು (cricketers) ಮೈದಾನಕ್ಕೆ ಆಗಮಿಸಿದ ವೇಳೆ, ಪಿಚ್ ಗಳು ಅಕ್ಷರಶಃ ಕಸದ ತೊಟ್ಟಿಯಂತಾಗಿ ಪರಿವರ್ತಿತವಾಗಿರುವುದು ಬೆಳಕಿಗೆ ಬಂದಿದೆ. ಕ್ರಿಕೆಟ್ ಪಟುಗಳೇ ಪಿಚ್ ಮೇಲೆ ಬಿದ್ದಿದ್ದ ಮದ್ಯದ ಬಾಟಲಿ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು (Waste material) ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.
‘ಚಿಕ್ಕ ಮಕ್ಕಳು ಕ್ರಿಕೆಟ್ ಕಲಿಯುವ ಸ್ಥಳವನ್ನು ಬೇಕಾಬಿಟ್ಟಿಯಾಗಿ ಕಲುಷಿತಗೊಳಿಸಿ ಹಾಳು ಮಾಡಿರುವುದು ಖಂಡನಾರ್ಹವಾದುದಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳಿಗೆ ಆಸ್ಪದವಾಗದಂತೆ ಎನ್ಇಎಸ್ ಸಂಸ್ಥೆಯವರು ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಕೆಲ ಕ್ರಿಕೆಟ್ ಪಟುಗಳು ಆಗ್ರಹಿಸಿದ್ದಾರೆ.