
ಕುಡಿಯುವ ನೀರಿಗೆ ಹಾಹಾಕಾರ : ಎಂಜಿನಿಯರ್ ಭೇಟಿ – ನಾಗರೀಕರ ಮನವಿ!
ಶಿವಮೊಗ್ಗ, ಡಿ. 28: ಮಹಾನಗರ ಪಾಲಿಕೆ 1 ನೇ ವಾರ್ಡ್ ವ್ಯಾಪ್ತಿ ಸೋಮಿನಕೊಪ್ಪ ಸುತ್ತಮುತ್ತಲು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ದೂರುಗಳ ಹಿನ್ನೆಲೆಯಲ್ಲಿ, ಬುಧವಾರ ಬೆಳಿಗ್ಗೆ ಜಲ ಮಂಡಳಿ ಸಹಾಯಕ ಎಂಜಿನಿಯರ್ ಜೀವನ್ ಅವರು ಭೇಟಿಯಿತ್ತು ನಾಗರೀಕರ ಅಹವಾಲು ಆಲಿಸಿದರು.
ಈ ವೇಳೆ ನಾಗರೀಕರು ಮನವಿ ಪತ್ರ ಅರ್ಪಿಸಿದರು. ಕಳೆದ ಕೆಲ ದಿನಗಳಿಂದ ಸೋಮಿನಕೊಪ್ಪ, ಕೆ.ಹೆಚ್.ಬಿ. ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯ ಕಂಡುಬರುತ್ತಿದೆ ಎಂದು ನಿವಾಸಿಗಳು ದೂರಿದರು.
ತುಂಗಾ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣವಿದ್ದರೂ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯವಾಗುತ್ತಿರುವುದು ಬೇಸರದ ಸಂಗತಿ. ಸೋಮಿನಕೊಪ್ಪದಲ್ಲಿ ಸಮರ್ಪಕ ನೀರು ಪೂರೈಕೆಗಾಗಿಯೇ ಹೊಸದಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಈ ಟ್ಯಾಂಕ್ ಮೂಲಕ ನೀರು ಪೂರೈಕೆಯಾಗುತ್ತಿಲ್ಲ.
ತಕ್ಷಣವೇ ಹೊಸ ಓವರ್ ಹೆಡ್ ಟ್ಯಾಂಕ್ ಮೂಲಕ ನೀರ ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಹಾಗೆಯೇ ಸೋಮಿನಕೊಪ್ಪ, ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಹಲವೆಡೆ 247 ಕಾಮಗಾರಿ ಅಪೂರ್ಣವಾಗಿದೆ. ಕೆಲವೆಡೆ ಪೈಪ್ ಲೈನ್ ಅಳವಡಿಕೆ ಮಾಡಿಲ್ಲ. ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ನಿವಾಸಿಗಳ ಅಹವಾಲು ಆಲಿಸಿದ ನಂತರ ಜೀವನ್ ಅವರು ಮಾತನಾಡಿ, ಕುಡಿಯುವ ನೀರು ಪೂರೈಕೆಯಲ್ಲಿನ ವ್ಯತ್ಯಯ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು. 247 ಪೈಪ್ ಲೈನ್ ಅಳವಡಿಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮನವಿ ಅರ್ಪಿಸುವ ವೇಳೆ ಪತ್ರಕರ್ತ ಬಿ.ರೇಣುಕೇಶ್, ಷಡಾಕ್ಷರಿ, ಅಮರ್ ಗ್ರ್ಯಾನೈಟ್ ಲಕ್ಷ್ಮಣ್, ನಾಗರತ್ನ, ಸಾವಿತ್ರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.