👉 ಶಿವಮೊಗ್ಗ : ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಅನುಮತಿ! 👉 ಪ್ರಧಾನಿ ಕಾರ್ಯಕ್ರಮಕ್ಕೆ 3 ಲಕ್ಷಕ್ಕೂ ಅಧಿಕ ಜನ ಭಾಗಿ ನಿರೀಕ್ಷೆ

ಶಿವಮೊಗ್ಗ, ಫೆ. 21: ಶಿವಮೊಗ್ಗ ನಗರದ ಸೋಗಾನೆಯಲ್ಲಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೆ ಕೇಂದ್ರ ವಿಮಾನಯಾನ ಸಚಿವಾಲಯದ ನಾಗರೀಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಿದೆ.
ಮತ್ತೊಂದೆಡೆ, ಮಂಗಳವಾರ (ಫೆ. 21) ದಿಂದಲೇ ವಿಮಾನಗಳ ಪ್ರಾಯೋಗಿಕ ಸಂಚಾರ ಕೂಡ ಆರಂಭವಾಗಲಿದೆ. ಈ ವಿಷಯವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಮಂಗಳವಾರ ಶಿವಮೊಗ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಇತ್ತೀಚೆಗೆ ಡಿಜಿಸಿಎ ತಂಡ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿಯಿತ್ತು ಕೂಲಂಕಷ ಪರಿಶೀಲನೆ ನಡೆಸಿತ್ತು. ನಿಲ್ದಾಣದಲ್ಲಿ ವಿಮಾನ ಸಂಚಾರಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯ ಗಮನಿಸಿ, ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿದೆ.
ಕಳೆದ ರಾತ್ರಿ ವಿಮಾನಗಳ ಸಂಚಾರಕ್ಕೆ ಡಿಜಿಸಿಎ ಅನುಮತಿ ದೊರಕಿದೆ. ಪ್ರಥಮ ಹಂತದ ಪರಿಶೀಲನೆಯಲ್ಲಿಯೇ ವಿಮಾನಗಳ ಹಾರಾಟಕ್ಕೆ ಅನುಮತಿ ದೊರಕಿದ ಹೆಗ್ಗಳಿಕೆ ಶಿವಮೊಗ್ಗ ನಿಲ್ದಾಣದ್ದಾಗಿದೆ ಎಂದು ಸಂಸದರು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ: ಫೆ. 27 ರಂದು 11.15 ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೆಹಲಿಯಿಂದ ನೇರವಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 10 ಗಂಟೆಯೊಳಗೆ ನಿಲ್ದಾಣದೊಳಗೆ ಸಾರ್ವಜನಿಕರು ಆಗಮಿಸಬೇಕು. ತದನಂತರ ಆಗಮಿಸುವ ನಾಗರೀಕರನ್ನು ಒಳಗಡೆ ಬಿಡುವುದಿಲ್ಲ. ಮಧ್ಯಾಹ್ನ 1 ಗಂಟೆಗೆ ಪ್ರಧಾನಿಯವರು ಶಿವಮೊಗ್ಗದಿಂದ ಬೆಳಗಾವಿಗೆ ತೆರಳಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದ್ದಾರೆ.
ಪ್ರವೇಶ ನಿರ್ಬಂಧ: ವಿಮಾನಗಳ ಪ್ರಾಯೋಗಿಕ ಹಾರಾಟ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣಕ್ಕೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಸಕ್ಷಮ ಅಧಿಕಾರಿಗಳ ಅನುಮತಿಯಿಲ್ಲದೆ ವಿಮಾನ ನಿಲ್ದಾಣಕ್ಕೆ ಯಾರಿಗೂ ಪ್ರವೇಶ ಕಲ್ಪಿಸುತ್ತಿಲ್ಲವಾಗಿದೆ.

Previous post ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಎಸ್.ಬಂಗಾರಪ್ಪ ಹೆಸರಿಡಲು ಹುಲ್ತಿಕೊಪ್ಪ ಶ್ರೀಧರ್ ಆಗ್ರಹ
Next post ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕನ್ನಡ ಕಡೆಗಣನೆ : ಎಎಪಿ ಪ್ರತಿಭಟನೆ!