
ಮತ್ತೆ ಬಿ.ಎಸ್.ಯಡಿಯೂರಪ್ಪ – ಕೆ.ಎಸ್.ಈಶ್ವರಪ್ಪ ಫೈಟ್ : ದೋಸ್ತಿಗಳು ದುಷ್ಮನಿಗಳಾಗಿದ್ದು ಹೇಗೆ?!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಮಾ. 14: ‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತೃಗಳಲ್ಲ, ಮಿತ್ರರೂ ಅಲ್ಲ…’ ಎಂಬ ಮಾತಿಗೆ, ಶಿವಮೊಗ್ಗ ಪಾಲಿಟಿಕ್ಸ್ (shimoga politics) ಸಾಕಷ್ಟು ಬಾರಿ ಸಾಕ್ಷಿಯಾಗಿದೆ. ಈಗ ಬಿಜೆಪಿಯ (bjp) ಅತಿರಥ ಮಹಾರಥ ನಾಯಕರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನಡುವಿನ ‘ಫೈಟ್’ (fight) ಮತ್ತೊಮ್ಮೆ ಮೇಲಿನ ಮಾತನ್ನು ದೃಢೀಕರಿಸಿದೆ!
ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ ಗೆಲ್ಲಬಹುದಾದ ಹಾಟ್ ಫೇವರೇಟ್ ಕ್ಷೇತ್ರಗಳಲ್ಲೊಂದಾದ ಹಾವೇರಿ-ಗದಗ (haveri – gadag) ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ, ಕೆ.ಎಸ್.ಈಶ‍್ವರಪ್ಪ ಪುತ್ರ ಕೆ.ಇ.ಕಾಂತೇಶ್’ಗೆ ಟಿಕೆಟ್ ಕೈತಪ್ಪಿದೆ. ಇದು ಕೆಎಸ್ಇ ಕೋಪತಾಪಕ್ಕೆ ಕಾರಣವಾಗಿದೆ.
‘ಪುತ್ರನಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿ ಇದೀಗ ತಪ್ಪಿಸಿದ್ದಾರೆ. ಬಿ.ಎಸ್.ವೈ (b s yeddiurappa) ಮೋಸ ಮಾಡಿದ್ದಾರೆ’ ಎಂದು ಕೆಎಸ್ಇ (k s eshwarappa) ಬಹಿರಂಗವಾಗಿಯೇ ಬಿ.ಎಸ್.ವೈ ವಿರುದ್ದ ಗುಟುರು ಹಾಕಲಾರಂಭಿಸಿದ್ದಾರೆ. ಅವರ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ. ಸೂಕ್ತ ರಾಜಕೀಯ ನಿರ್ಧಾರ ಪ್ರಕಟಿಸುವ ಘೋಷಣೆ ಮಾಡಿದ್ದಾರೆ.
ದೋಸ್ತಿಗಳು : ಒಂದಾನೊಂದು ಕಾಲದಲ್ಲಿ ಬಿ.ಎಸ್.ವೈ – ಕೆಎಸ್ಇ ಜೋಡಿಯ ಸ್ನೇಹ ಇಡೀ ರಾಜ್ಯದ ಗಮನ ಸೆಳೆದಿತ್ತು. ಇಬ್ಬರೂ ಗಳಸ್ಯಕಂಠಸ್ಯರಾಗಿದ್ದರು. ಇವರಿಬ್ಬರ ದೋಸ್ತಿಯನ್ನು ಗಮನಿಸಿ ‘ರಾಮ-ಲಕ್ಷ್ಮಣ’ರೆಂದೇ ಕರೆಯಲಾಗುತ್ತಿತ್ತು.
ಆದರೆ ಯಾವಾಗ ಅಧಿಕಾರದ ಗದ್ದುಗೆಯೇರಿದರೊ, ಅಂದಿನಿಂದ ಇವರಿಬ್ಬರ ನಡುವಿನ ಸ್ನೇಹ ಭಾವವು ಮರೆಯಾಗಲಾರಂಭಿಸಿತು. ನಾನಾ ಕಾರಣಗಳಿಂದ ವೈಮನಸ್ಸು ಬೆಳೆಯಲಾರಂಭಿಸಿತು. 2009 ರಲ್ಲಿ ಬಿ.ವೈ.ರಾಘವೇಂದ್ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಇವರಿಬ್ಬರ ನಡುವಿನ ಮುಸುಕಿನ ಗುದ್ದಾಟ ಹಾದಿಬೀದಿ ರಂಪವಾಗಿ ಪರಿವರ್ತಿತವಾಗಿತ್ತು.
ಕೆಎಸ್ಇ (kse) ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ, ಪುತ್ರ ಬಿ.ವೈ.ರಾಘವೇಂದ್ರಗೆ (b y raghavendra) ಲೀಡ್ ಕಡಿಮೆ ಬಂದಿದ್ದಕ್ಕೆ ಬಹಿರಂಗವಾಗಿಯೇ ಬಿ.ಎಸ್.ವೈ (bsy) ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಕೆ.ಎಸ್.ಇ ಕೂಡ ತಿರುಗೇಟು ನೀಡಿದ್ದರು. ಅಂದಿನಿಂದ ಇಬ್ಬರ ನಡುವೆ ದೊಡ್ಡ ಕಂದಕವೇ ನಿರ್ಮಾಣವಾಗಿತ್ತು.
ಬಿ.ಎಸ್.ವೈ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದ ವೇಳೆ ಇವರಿಬ್ಬರ ನಡುವಿನ ವಾಕ್ಸಮರ ತಾರಕಕ್ಕೇರಿತ್ತು. ಅವರು ಬಿಜೆಪಿಗೆ ಮರಳಿದ ನಂತರವೂ ಇಬ್ಬರ ನಡುವಿನ ಮುನಿಸು ಕಡಿಮೆಯಾಗಿರಲಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಒಬ್ಬರಿಗೊಬ್ಬರು ರಾಜಕೀಯವಾಗಿ ಹಗೆ ಸಾಧಿಸಿಕೊಂಡು ಬರುತ್ತಿದ್ದರು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಕೆಎಸ್ಇ ಅವರು ಬಿ.ಎಸ್.ವೈ ವಿರುದ್ದ ತೊಡೆ ತಟ್ಟಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆ ಬಿ.ಎಸ್.ವೈ – ಕೆ.ಎಸ್.ಇ ಜೊತೆಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಕೆಲ ಬಾರಿ ಬಿ.ಎಸ್.ವೈ ಶಿವಮೊಗ್ಗ ನಿವಾಸಕ್ಕೆ ಕೆ.ಎಸ್.ಇ ಭೇಟಿ ನೀಡಿ ಚರ್ಚಿಸಿದ್ದರು. ಇಬ್ಬರ ನಡುವಿನ ಹಗೆ ಕಡಿಮೆಯಾಯಿತು ಎನ್ನುಷ್ಟರಲ್ಲಿಯೇ ಮತ್ತೇ ಸ್ಫೋಟಗೊಂಡಿದೆ.
ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಲು ಬಿ.ಎಸ್.ವೈ ಕಾರಣರಾಗಿದ್ದಾರೆ. ಪುತ್ರನಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ಕೆಎಸ್ಇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವರಿಬ್ಬರ ನಡುವಿನ ಕಲಹ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆಯೋ ಇನ್ನಷ್ಟೆ ಕಾದು ನೋಡಬೇಕಾಗಿದೆ.