
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ದ ಪೋಕ್ಸೋ ಕೇಸ್ : ಸಿಐಡಿ ತನಿಖೆಗೆ ಹಸ್ತಾಂತರ!
ಬೆಂಗಳೂರು, ಮಾ. 15: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (b s yediyurappa) ವಿರುದ್ದ ದಾಖಲಾಗಿರುವ ಪೋಕ್ಸೊ (posco) ಪ್ರಕರಣದ ತನಿಖೆಯನ್ನು ಸಿಐಡಿ (cid) ತನಿಖೆಗೊಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತಂತೆ ರಾಜ್ಯ ಪೊಲೀಸ್ ಇಲಾಖೆ ಮಹಾನಿರ್ದೇಶಕರು ಕಚೇರಿ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಹೇಳಲಾಗಿದೆ.
17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ (sexual harassment) ನೀಡಿದ ಆರೋಪ ಬಿ.ಎಸ್.ಯಡಿಯೂರಪ್ಪ ಅವರ ಮೇಲಿದೆ. ಈ ಕುರಿತಂತೆ ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ. ಮಾ. 14 ರ ರಾತ್ರಿ ಬೆಂಗಳೂರಿನ (bengaluru) ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ (fir) ದಾಖಲಾಗಿದೆ.
ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೋ ) ಯ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ (ipc) ಸೆಕ್ಷನ್ 354 (ಎ) (ಲೈಂಗಿಕ ಕಿರುಕುಳ) ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೂರಿನಲ್ಲೇನಿದೆ? : ಪ್ರಕರಣವೊಂದರಲ್ಲಿ ಸಹಾಯ ಕೋರಿ ಫೆಬ್ರವರಿ 2 ರಂದು ತಮ್ಮ ಪುತ್ರಿಯೊಂದಿಗೆ ಯಡಿಯೂರಪ್ಪರ ಮನೆಗೆ ಹೋಗಿದ್ದಾಗ, ಅವರು ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ನಂತರ ಕ್ಷಮೆಯಾಚಿಸಿ, ಈ ವಿಷಯ ಯಾರಿಗೂ ತಿಳಿಸದಂತೆ ಹೇಳಿದ್ದರು ಎಂದು ಸಂತ್ರಸ್ತ ಬಾಲಕಿ ತಾಯಿ ಪೊಲೀಸರಿಗೆ (police) ನೀಡಿರುವ ದೂರಿನಲ್ಲಿ (complaint) ತಿಳಿಸಿದ್ದಾರೆ.