
ಶಿವಮೊಗ್ಗದಲ್ಲಿ ಮೋದಿ ಚುನಾವಣಾ ಸಮಾವೇಶ : ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ!
ಬೆಂಗಳೂರು, ಮಾ. 18: ‘ರೈತ ಚಳವಳಿಗಳ ತವರುನೆಲ ಶಿವಮೊಗ್ಗಕ್ಕೆ (shimoga) ಪ್ರಧಾನಿ ನರೇಂದ್ರ ಮೋದಿ (prime minister narendra modi) ಅವರಿಗೆ ಸ್ವಾಗತ. ಆದರೆ ರಾಜ್ಯದ ರೈತರಿಗೆ ಬಿಜೆಪಿಯಿಂದ ಸಾಲುಸಾಲು ಅನ್ಯಾಯವಾಗಿದೆ. ಹೀಗಿರುವಾಗ ರಾಜ್ಯದ ರೈತರು ಏಕೆ ಬಿಜೆಪಿಯನ್ನು (bjp) ಬೆಂಬಲಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (chief minister siddaramaiah) ಅವರು ಟೀಕಾಪ್ರಹಾರ ನಡೆಸಿದ್ದಾರೆ.
ಈ ಕುರಿತಂತೆ ಸೋಮವಾರ ಅವರು ಪತ್ರಿಕಾ ಪ್ರಕಟಣೆ (press statement) ಬಿಡುಗಡೆ ಮಾಡಿದ್ದಾರೆ. ಯಡಿಯೂರಪ್ಪ (yediyurappa) ಅವರು ಹಿಂದೊಮ್ಮೆ ರೈತರ ಸಾಲ ಮನ್ನಾದ ಭರವಸೆ ನೀಡಿ ಮುಖ್ಯಮಂತ್ರಿಯಾದ ಮೇಲೆ ನಮ್ಮ ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಎಂದು ಹೇಳಿದ್ದರು. ಹಾವೇರಿಯಲ್ಲಿ (haveri) ರಸಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಿಸಿ ಅಮಾಯಕ ರೈತರನ್ನು ಬಲಿ ಪಡೆದಿದ್ದರು. ಇಂದು ಅದೇ ಯಡಿಯೂರಪ್ಪನವರ ಮಗನಿಗೆ ಮತ ನೀಡಿ ಎನ್ನಲು ನಿಮ್ಮ ಆತ್ಮಸಾಕ್ಷಿ ಒಪ್ಪುವುದೇ? ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.
2018 ರ ವಿಧಾನಸಭಾ ಚುನಾವಣಾ (assembly election) ಪ್ರಣಾಳಿಕೆಯಲ್ಲಿ ರಾಜ್ಯದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮೊದಲ ಸಂಪುಟ ಸಭೆಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಅಧಿಕಾರ ಸಿಕ್ಕ ಮೇಲೆ ಕೊಟ್ಟ ಮಾತನ್ನು ಈಡೇರಿಸದೆ, ತಮಗೆ ದ್ರೋಹ ಬಗೆದ ಬಿಜೆಪಿಯನ್ನು ನಾಡಿನ ರೈತರು ಯಾಕೆ ಬೆಂಬಲಿಸಬೇಕು? ಎಂದು ಕೇಳಿದ್ದಾರೆ.
ರಾಜ್ಯದಲ್ಲಿ ಬರ ಘೋಷಣೆ ಮಾಡಿ 6 ತಿಂಗಳುಗಳ ಕಳೆದಿದೆ. ರೂ.18,177 ಕೋಟಿ ಪರಿಹಾರದ ಹಣ ಬಿಡುಗಡೆಗೆ ಒತ್ತಾಯಿಸಿ ಹಲವು ಬಾರಿ ಪತ್ರ ಬರೆದಿದ್ದೇನೆ. ಖುದ್ದಾಗಿ ತಮ್ಮನ್ನು ಹಾಗೂ ಗೃಹ ಸಚಿವ ಅಮಿತ್ ಶಾ (amith sha) ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಆದರೂ ಈವರೆಗೆ ನಯಾಪೈಸೆ ಪರಿಹಾರದ ಹಣ ಬಿಡುಗಡೆ ಆಗಿಲ್ಲ. ರಾಜ್ಯದ ರೈತರ ಮೇಲೆ ಯಾಕಿಷ್ಟು ದ್ವೇಷ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬರದಿಂದ ಜನರು ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ (nreg) ಯೋಜನೆಯಡಿ ಕೆಲಸದ ದಿನಗಳನ್ನು 100 ರಿಂದ 150ಕ್ಕೆ ಹೆಚ್ಚಳ ಮಾಡಬೇಕು ಎಂದು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದರೂ ಈ ವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭದ್ರಾ ಮೇಲ್ದಂಡೆ (upper bhadra) ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್ (central govt budget) ನಲ್ಲಿ ರೂ. 5,300 ಕೋಟಿ ಅನುದಾನ ಘೋಷಿಸಿ ವರ್ಷಗಳೇ ಕಳೆದರೂ ಈ ವರೆಗೆ ನಯಾಪೈಸೆ ರಾಜ್ಯಕ್ಕೆ ಬಂದಿಲ್ಲ. ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಕೇಂದ್ರದ ಅನುಮತಿ ಸಿಗದೆ ನೆನೆಗುದಿಗೆ ಬಿದ್ದಿವೆ. ಕಾವೇರಿ (kaveri) ನೀರು ಹಂಚಿಕೆ ವಿಷಯದಲ್ಲಿ ಸಂಕಷ್ಟಸೂತ್ರ ರಚನೆಗೆ ಮಧ್ಯಸ್ಥಿಕೆ ವಹಿಸದೆ ಕೇಂದ್ರ ಸರ್ಕಾರ ನಾಡಿನ ರೈತರನ್ನು ಕೈಬಿಟ್ಟಿತ್ತು.
ದೇಶದ ಕೃಷಿ ಕ್ಷೇತ್ರವನ್ನು ಅದಾನಿ, ಅಂಬಾನಿಯಂತಹ (adani, ambani) ಉದ್ಯಮಿಗಳ ಕೈಗಿಡುವ ದುಷ್ಟ ಆಲೋಚನೆಯೊಂದಿಗೆನ ಎಪಿಎಂಸಿ (apmc) ತಿದ್ದುಪಡಿ ಕಾಯ್ದೆ ಸೇರಿದಂತೆ 3 ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿತು. ಈ ಕಾಯ್ದೆಗಳನ್ನು ವಾಪಾಸು ಪಡೆಯುವಂತೆ ಹೋರಾಟ ಮಾಡುತ್ತಿದ್ದ 750ಕ್ಕೂ ಹೆಚ್ಚು ರೈತರು ಅನಾರೋಗ್ಯ, ಹವಾಮಾನ ವೈಪರಿತ್ಯ, ಪೊಲೀಸ್ ದೌರ್ಜನ್ಯಗಳಿಗೆ ಬಲಿಯಾದರು. ಇವರಿಗೆ ನ್ಯಾಯ ಕೊಡಿಸಬೇಕಾದವರು ನೀವಲ್ಲವೆ ಎಂದು ಪ್ರಧಾನಿಯವರಿಗೆ ಸಾಲುಸಾಲು ಪ್ರಶ್ನೆಗಳನ್ನು ಸಿದ್ದರಾಮಯ್ಯ ಕೇಳಿದ್ದಾರೆ.