
ಶಿವಮೊಗ್ಗ ಜಿಲ್ಲೆಯಲ್ಲಿ ‘ಬೆಂಕಿ ಬಿಸಿಲು..!’ : ಬರಿದಾಗುತ್ತಿರುವ ಕೆರೆಕಟ್ಟೆಗಳು – ಶುರುವಾಗುತ್ತಿದೆ ಕುಡಿಯುವ ನೀರಿಗೆ ಹಾಹಾಕಾರ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಮಾ. 19: ಇತ್ತೀಚಿನ ವರ್ಷಗಳಲ್ಲಿ ಕಂಡುಬರದ ರಣ ಬಿಸಿಲಿಗೆ (Rising temperature), ಪ್ರಸ್ತುತ ವರ್ಷ ಶಿವಮೊಗ್ಗ ಜಿಲ್ಲೆ (shimoga district) ಸಾಕ್ಷಿಯಾಗುತ್ತಿದೆ. ಬಯಲು ಸೀಮೆಯ ರೀತಿಯಲ್ಲಿ ಮಲೆನಾಡಿನಲ್ಲಿ (malnad) ತಾಪಮಾನ ದಾಖಲಾಗುತ್ತಿದೆ. ಇದು ನಾಗರೀಕರನ್ನು ಹೈರಾಣಾಗುವಂತೆ ಮಾಡಿದೆ!
ಒಂದೆಡೆ ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ, ಕಳೆದ ಎರಡ್ಮೂರು ತಿಂಗಳಿನಿಂದ ಮಳೆ (rain) ಕಣ್ಮರೆಯಾಗಿದೆ. ಇದೆಲ್ಲದರ ನೇರ ಪರಿಣಾಮ ನದಿ, ಕೆರೆಕಟ್ಟೆ, ನೀರಿನ ಸಂಗ್ರಹದ ಮೇಲೆ ಬೀರಲಾರಂಭಿಸಿದೆ. ಅಂತರ್ಜಲ ಮಟ್ಟ ಕುಸಿಯಲಾರಂಭಿಸಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ಜಲಮೂಲಗಳು (Water bodies) ಸಂಪೂರ್ಣ ಬರಿದಾಗಿವೆ. ಉಳಿದೆಡೆಯೂ ಕೂಡ ಉಷ್ಣಾಂಶದ (temperature) ತೀವ್ರತೆಗೆ ಜಲ ಸಂಗ್ರಹ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಾರಂಭಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ತಿಂಗಳ ವೇಳೆಗೆ ಗಂಭೀರ ಸ್ವರೂಪದ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳು ಗೋಚರವಾಗುತ್ತಿವೆ.
ಈಗಾಗಲೇ ಹಲವು ಗ್ರಾಮಗಳಲ್ಲಿ ಬೋರ್ ವೆಲ್, ಬಾವಿಗಳಲ್ಲಿ ಅಂತರ್ಜಲ (ground water) ಕುಸಿತವಾಗುತ್ತಿರುವುದರಿಂದ ಕುಡಿಯುವ ನೀರು (drinking water) ಪೂರೈಕೆಯಲ್ಲಿ ವ್ಯತ್ಯಯವಾಗುವಂತಾಗಿದೆ. ತಾಪಮಾನದ ಪ್ರಮಾಣ ಇದೇ ರೀತಿ ಮುಂದುವರಿದರೆ ಜೀವ ಜಲಕ್ಕೆ ತೀವ್ರ ಸ್ವರೂಪದ ತತ್ವಾರ ಎದುರಾಗುವುದು ನಿಶ್ಚಿತವಾಗಿದೆ. ಕಣ್ಮರೆಯಾದ ಬೇಸಿಗೆ ಮಳೆ : ಕಳೆದ ವರ್ಷ ಆಗಾಗ್ಗೆ ಬೀಳುತ್ತಿದ್ದ ಬೇಸಿಗೆ (summer) ಮಳೆಯಿಂದ ಜನ – ಜಾನುವಾರುಗಳಿಗೆ (People – Cattle) ಸಾಕಷ್ಟು ಅನುಕೂಲವಾಗಿತ್ತು. ಪ್ರಸ್ತುತ ಮಳೆಯೇ ಇಲ್ಲವಾಗಿದೆ. ಇದರಿಂದ ಜಾನುವಾರುಗಳು ಮೇವಿಗೆ (fodder) ಅಲೆದಾಡುವಂತಾಗಿದೆ. ಹಸಿವಿನಿಂದ ಕಸಕಡ್ಡಿ, ಪ್ಲಾಸ್ಟಿಕ್ ತಿನ್ನುವಂತಹ ದಾರುಣ ದೃಶ್ಯಗಳು ಹಲವೆಡೆ ಕಂಡುಬರುತ್ತಿವೆ.
‘ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕ್ರಮ’ : ಶಿವಮೊಗ್ಗ ಜಿಪಂ ಸಿಇಓ
*** ‘ಗ್ರಾಮಗಳಲ್ಲಿ ಎದುರಾಗುವ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕಾಲಮಿತಿಯೊಳಗೆ ಕ್ರಮಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಪಟ್ಟಿಯನ್ನು ಕೂಡ ಸಿದ್ದಪಡಿಸಿಕೊಟ್ಟುಕೊಳ್ಳಲಾಗಿದೆ. ಅಗತ್ಯ ಪರಿಹಾರ ಕ್ರಮಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ’ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ (shimoga zp ceo snehal sudhakar lokhande) ಅವರು ತಿಳಿಸಿದ್ದಾರೆ.

ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕುಡಿಯುವ ನೀರು ಪೂರೈಕೆ ಸಮಸ್ಯೆ ಪರಿಹಾರಕ್ಕೆಂದು ಪ್ರತಿ ತಾಲೂಕಿಗೆ ಅನುದಾನ ಮೀಸಲಿರಿಸಲಾಗಿದೆ. 7, 15 ದಿನಗಳ ಕ್ರಿಯಾ ಯೋಜನೆ ಸಿದ್ದಪಡಿಸಿ ಸಮರೋಪಾದಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗಿದೆ. ಸದ್ಯ ಯಾವುದೇ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಗ್ರಾಮಗಳಲ್ಲಿನ (villages) ಸಮಸ್ಯೆ ಪರಿಹಾರಕ್ಕೆ ನಿರ್ದಿಷ್ಟ ಅವಧಿಯಲ್ಲಿ ಕ್ರಮಕೈಗೊಳ್ಳುವಂತೆ ಈಗಾಗಲೇ ತಾಲೂಕು ಹಾಗೂ ಗ್ರಾಮ ಪಂಚಾಯ್ತಿ ಆಡಳಿತಗಳಿಗೆ ಸೂಚಿಸಲಾಗಿದೆ. ಜೊತೆಗೆ ಏಪ್ರಿಲ್ – ಮೇ ತಿಂಗಳಲ್ಲಿ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಪಟ್ಟಿ ಸಿದ್ದಪಡಿಸಿ, ಮುನ್ನೆಚ್ಚರಿಕೆ ಕ್ರಮಗಳ ಅನುಷ್ಠಾನಕ್ಕೆ ಸೂಚಿಸಲಾಗಿದೆ ಎಂದು ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಸ್ಪಷ್ಟಪಡಿಸಿದ್ದಾರೆ.
ಜಾನುವಾರುಗಳಿಗೆ ಮೇವು – ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಪರಿಸರ ಸಿ. ರಮೇಶ್ ಆಗ್ರಹ
*** ‘ಪ್ರಸ್ತುತ ವರ್ಷ ಬೇಸಿಗೆ ಬಿಸಿಲ ತಾಪಮಾನ ಹೆಚ್ಚಿರುವ ಕಾರಣದಿಂದ ಹಲವೆಡೆ ಕೆರೆಕಟ್ಟೆಗಳಲ್ಲಿ ನೀರು ಬರಿದಾಗುತ್ತಿದೆ. ಹಸಿರು ಮೇವು ಒಣಗಿದೆ. ಇದರಿಂದ ಜಾನುವಾರುಗಳು ಮೇವು – ನೀರಿಗೆ ಅಲೆದಾಡುವಂತಾಗಿದೆ. ಹಸಿವು ಇಂಗಿಸಿಕೊಳ್ಳಲು ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಹಾಗೂ ಪೇಪರ್ ತಿನ್ನುವಂತಹ ದಾರುಣ ಸ್ಥಿತಿ ಕಂಡುಬರುತ್ತಿದೆ’ ಎಂದು ಪರಿಸರ ಹೋರಾಟಗಾರ ಪರಿಸರ ಸಿ. ರಮೇಶ್ ಅವರು ತಿಳಿಸಿದ್ದಾರೆ.

ಜಾನುವಾರುಗಳಿಗೆ ಅಗತ್ಯ ಮೇವು ದಾಸ್ತಾನಿದೆ. ಯಾವುದೇ ತೊಂದರೆಯಿಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಶಿವಮೊಗ್ಗ ನಗರದ ಸುತ್ತಮುತ್ತಲಿನ ಪ್ರದೇಶಗಳ ಹಳ್ಳಿಗಳಲ್ಲಿಯೇ ಜಾನುವಾರುಗಳು ಮೇವಿಲ್ಲದೆ ಪರದಾಡುವಂತಾಗಿದೆ. ಹಾಗಾದರೆ ಮೇವು ದಾಸ್ತಾನು ಎಲ್ಲಿದೆ? ಏಕೆ ಜಾನುವಾರುಗಳಿಗೆ ಲಭ್ಯವಾಗುತ್ತಿ? ಎಂದು ಪ್ರಶ್ನಿಸಿದ್ದಾರೆ.
ಹಗಲು ವೇಳೆ ಜಾನುವಾರುಗಳಿರುವ ಸ್ಥಳದಲ್ಲಿಯೇ ಅವುಗಳಿಗೆ ಮೇವು ಪೂರೈಕೆ ಮಾಡಲು ಆಡಳಿತ ಕ್ರಮಕೈಗೊಳ್ಳಬೇಕು. ಈ ಮೂಲಕ ಮೂಕಪ್ರಾಣಿಗಳ ಹಸಿವು ಇಂಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪರಿಸರ ರಮೇಶ್ ಅವರು ಆಗ್ರಹಿಸಿದ್ದಾರೆ.