
ಹೆಚ್ಚಿದ ನಕಲಿ ಕಾರ್ಮಿಕ ಕಾರ್ಡ್ – ಕಠಿಣ ಕ್ರಮಕೈಗೊಳ್ಳುವುದೆ ಕಾರ್ಮಿಕ ಇಲಾಖೆ?!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಮಾ. 22: ಸೌಲಭ್ಯಗಳ ಆಸೆಗೆ ಕಾರ್ಮಿಕರಲ್ಲದವರು, ಶ್ರೀಮಂತರು ಕೂಡ ಸುಳ್ಳು ದಾಖಲಾತಿ ಸಲ್ಲಿಸಿ ಕಾರ್ಮಿಕ ಕಾರ್ಡ್ (labour card) ಪಡೆಯುತ್ತಿದ್ದಾರೆ. ಆದರೆ ಇಂದಿಗೂ ಕೂಡ ಬಿಸಿಲು – ಮಳೆಯಲ್ಲಿ ಕಷ್ಟಪಟ್ಟು ದುಡಿಯುವ ಅದೆಷ್ಟೊ ಅರ್ಹ ಕಟ್ಟಡ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಮಿಕರು, ಕಾರ್ಡ್ ಪಡೆಯಲು ಸಾಧ‍್ಯವಾಗದೆ ಪರಿತಪಿಸುತ್ತಿದ್ದಾರೆ!
ಈ ಹಿನ್ನೆಲೆಯಲ್ಲಿ ಅನರ್ಹರಿಗೆ ನೀಡಲಾಗಿರುವ ಕಾರ್ಡ್ ಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸಬೇಕು. ಅರ್ಹ ಕಟ್ಟಡ ಕಾರ್ಮಿಕರಿಗೆ ಕಾರ್ಡ್ ವಿತರಣೆ ಮಾಡುವ ಕಾರ್ಯ ಆರಂಭಿಸಬೇಕು. ಕಾರ್ಮಿಕರು ಕಾರ್ಯನಿರ್ವಹಣೆ ಮಾಡುತ್ತಿರುವ ಸ್ಥಳಗಳಿಗೆ ಕಾರ್ಮಿಕ ಇಲಾಖೆ (Labour Department) ಅಧಿಕಾರಿಗಳು ಖುದ್ದು ಭೇಟಿಯಿತ್ತು ಪರಿಶೀಲಿಸಬೇಕು. ಅರ್ಹ ಬಡ ಕಾರ್ಮಿಕರಿಗೆ ಕಾರ್ಡ್ ವಿತರಿಸಬೇಕೆಂಬ ಆಗ್ರಹ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘಟನೆಗಳಿಂದ ಕೇಳಿಬರಲಾರಂಭಿಸಿದೆ.
ಸೌಲಭ್ಯ : ವಸತಿ, ವಾಣಿಜ್ಯ ಮತ್ತು ಸರ್ಕಾರಿ ಸೇರಿದಂತೆ ಎಲ್ಲಾ ನಿರ್ಮಾಣ ಯೋಜನೆಗಳಿಗೆ ಶೇ.1 ರಷ್ಟು ಸೆಸ್ ವಿಧಿಸಲಾಗುತ್ತದೆ. ಇದರಿಂದ ಸಂಗ್ರಹವಾಗುವ ಹಣವನ್ನು ಕಾರ್ಮಿಕರ ಶ್ರೇಯೋಭಿವೃದ್ದಿಗೆ ಮಾತ್ರ ಬಳಕೆಯಾಗಬೇಕು. ಅದರಂತೆ ಕಾರ್ಮಿಕರ ಆರೋಗ್ಯ, ವಸತಿ, ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಸೆಸ್ ಅನುದಾನ ಬಳಸಲಾಗುತ್ತಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕ ಕಾರ್ಡ್‌ಗಳನ್ನು ಕಟ್ಟಡ ಕಾರ್ಮಿಕರು ಮತ್ತು ಸಂಬಂಧಿತ ಕೆಲಸ ಮಾಡುವವರಿಗೆ ಮಾತ್ರ ನೀಡಬೇಕಾಗಿದೆ. ಆದರೆ ನಿಯಮಕ್ಕೆ ವಿರುದ್ದವಾಗಿ ಕಾರ್ಡ್ ಗಳ ವಿತರಣೆ ಮಾಡಲಾಗಿದೆ ಎಂಬುವುದು ಸಂಘಟನೆಗಳು ಆರೋಪವಾಗಿದೆ.
ಸ್ಥಳಕ್ಕೆ ಭೇಟಿ ನೀಡಲಿ : ಸಾಕಷ್ಟು ಅನರ್ಹರು ಕಾರ್ಮಿಕ ಕಾರ್ಡ್ ಪಡೆದು ಅಸಲಿ ಕಾರ್ಮಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಕಾನೂನುಬಾಹಿರವಾಗಿ ಪಡೆಯುತ್ತಿದ್ದಾರೆ. ಆಹಾರ ಇಲಾಖೆಯು ನಕಲಿ ಬಿಪಿಎಲ್ ಕಾರ್ಡ್ ರದ್ದತಿ ಅಭಿಯಾನ ಕೈಗೊಂಡಂತೆಯೇ ಕಾರ್ಮಿಕ ಇಲಾಖೆ ಕೂಡ ನಕಲಿ ಕಾರ್ಮಿಕ ಕಾರ್ಡ್ ರದ್ದತಿ ಅಭಿಯಾನ ಆರಂಭಿಸಬೇಕು. ಕಾರ್ಮಿಕರು ಕಾರ್ಯನಿರ್ವಹಣೆ ಮಾಡುವ ಸ್ಥಳಗಳಿಗೆ ಅಧಿಕಾರಿಗಳು ಖುದ್ದು ಭೇಟಿಯಿತ್ತು ಪರಿಶೀಲಿಸಬೇಕು. ಅರ್ಹರಿಗೆ ಕಾರ್ಡ್ ವಿತರಣೆ ಮಾಡಬೇಕು.
ಬಡ ಕಾರ್ಮಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಶ್ರೀಮಂತರು ಪಡೆಯುತ್ತಿರುವುದು ಖಂಡನಾರ್ಹವಾದುದಾಗಿದೆ. ಅಂಥವರನ್ನು ಪತ್ತೆ ಹಚ್ಚಿ, ಅವರು ಪಡೆದಿರುವ ಗುರುತಿನ ಚೀಟಿ ನೋಂದಣಿ ರದ್ದುಗೊಳಿಸಬೇಕು. ಅಂಥಹವರ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕು. ಅವರು ಪಡೆದಿರುವ ಸೌಲಭ್ಯ ವಾಪಾಸ್ ಪಡೆದುಕೊಳ್ಳಬೇಕು ಎಂಬ ಆಗ್ರಹ ಕಟ್ಟಡ ಕಾರ್ಮಿಕರ ವಲಯದಿಂದ ಕೇಳಿಬರಲಾರಂಭಿಸಿದೆ.