
ಬಿಸಿಲ ತಾಪಕ್ಕೆ ಬರಿದಾಗುತ್ತಿರುವ ಬೋರ್’ವೆಲ್, ಬಾವಿಗಳು : ಟ್ಯಾಂಕರ್ ಮೂಲಕ ನೀರು ಪೂರೈಕೆ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಮಾ. 27: ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಅಂತರ್ಜಲ (ground water) ಮಟ್ಟ ಗಂಭೀರ ಸ್ವರೂಪದಲ್ಲಿ ಕುಸಿಯಲಾರಂಭಿಸಿದೆ. ಬೋರ್’ವೆಲ್ (borewells), ಬಾವಿಗಳು (wells) ನೀರಿಲ್ಲದೆ ಬರಿದಾಗಲಾರಂಭಿಸಿ!
ಶಿವಮೊಗ್ಗ (shivamogga) ನಗರದ ಹೊರವಲಯ ಹಾಗೂ ತಾಲೂಕಿನ ಹಲವು ಗ್ರಾಮಗಳಲ್ಲಿ, ಜಲಮೂಲಗಳು (water bodies) ಒಣಗಿ ಹೋಗಿವೆ. ಇದರಿಂದ ಕುಡಿಯುವ ನೀರು (drinking water) ಪೂರೈಕೆಯ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರುವಂತಾಗಿದೆ.
ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಣಸೋಡು, ಬಸವನಗಂಗೂರು ಗ್ರಾಮ ವ್ಯಾಪ್ತಿ ಸೇರಿದಂತೆ ಹಲವೆಡೆ ನೀರು ಪೂರೈಕೆಯ ಬೋರ್ ವೆಲ್ ಗಳು ನೀರಲ್ಲದೆ ಬರಿದಾಗಿವೆ. ಅಂತರ್ಜಲ ಮಟ್ಟ ಕಡಿಮೆಯಾಗಿ, ಮೋಟಾರ್ ಗಳು ಸುಟ್ಟು ಹೋಗುತ್ತಿವೆ.
ಈ ಕಾರಣದಿಂದ ಗ್ರಾಮ ಪಂಚಾಯ್ತಿ ಆಡಳಿತವು ಹಗಲಿರುಳು ಸಮಸ್ಯೆ ಪರಿಹಾರಕ್ಕೆ ಶ್ರಮಿಸುವಂತಾಗಿದೆ. ಕೆಲವೆಡೆ ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಯ ವ್ಯವಸ್ಥೆ ಮಾಡಲಾರಂಭಿಸಿದೆ.
ಜಾನುವಾರುಗಳ ಸಂಕಷ್ಟ : ಶಿವಮೊಗ್ಗ ತಾಲೂಕಿನ ಸೋಮಿನಕೊಪ್ಪ, ಮೋಜಪ್ಪನ ಹೊಸೂರು, ಬಸವನಗಂಗೂರು, ಕೋಟೆಗಂಗೂರು, ಗೆಜ್ಜೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿನ ಬಹುತೇಕ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿವೆ.
ಇದರಿಂದ ಜಾನುವಾರುಗಳು (cattels) ಕುಡಿಯುವ ನೀರಿಗೆ ಒಂದೆಡೆಯಿಂದ ಮತ್ತೊಂದೆಡೆ ಅಲೆದಾಡುವಂತಾಗಿದೆ. ಹಾಗೆಯೇ ಬಿಸಿಲ ತಾಪಕ್ಕೆ (temperature) ಹಸಿರು ಹುಲ್ಲು ಸಂಪೂರ್ಣ ಒಣಗಿ ಹೋಗಿದೆ. ಮೇವು – ನೀರಿಲ್ಲದೆ (fodder – water) ಜಾನುವಾರುಗಳು ಪರದಾಡುವಂತಾಗಿದ್ದು, ಹಸಿವು ಇಂಗಿಸಿಕೊಳ್ಳಲು ಸಿಕ್ಕಸಿಕ್ಕ ವಸ್ತುಗಳನ್ನು ತಿನ್ನುತ್ತಿರುವ ದಾರುಣ ಸ್ಥಿತಿ ಕಂಡುಬರುತ್ತಿದೆ.
ಅತ್ಯದಿಕ : ಪ್ರಸ್ತುತ ವರ್ಷ ಮುಂಗಾರು ಮಳೆ (monsoon) ಕೈಕೊಟ್ಟಿತ್ತು. ಈ ನಡುವೆ ಇತ್ತೀಚಿನ ವರ್ಷಗಳಲ್ಲಿ ಹಿಂದೆಂದೂ ಕಂಡರೀಯದ ತಾಪಮಾನ ಕಂಡುಬರುತ್ತಿದೆ. ಇದರಿಂದ ಜನಜೀವನ ತತ್ತರಿಸುವಂತಾಗಿದೆ.
ಇದರ ಜೊತೆಗೆ ಬೇಸಿಗೆ (summer) ವೇಳೆ ಬೀಳುತ್ತಿದ್ದ ಮಳೆಯೂ ಕೂಡ ಕಣ್ಮರೆಯಾಗಿದೆ. ಇದರಿಂದ ಬರದ ತೀವ್ರತೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಏಪ್ರಿಲ್ – ಮೇ ತಿಂಗಳುಗಳು ಮತ್ತಷ್ಟು ಸಂಕಷ್ಟ ತಂದೊಡ್ಡುವುದು ನಿಶ್ಚಿತವಾಗಿದೆ.