
ದೆಹಲಿಗೆ ಆಹ್ವಾನಿಸಿ ಕೆ.ಎಸ್.ಈಶ್ವರಪ್ಪ ಭೇಟಿಯಾಗದ ಅಮಿತ್ ಶಾ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಏ. 3: ಕೇಂದ್ರ ಗೃಹ ಸಚಿವ ಅಮಿತ್ ಶಾ (amith shah) ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (shimoga loksabha constituency) ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (k s eshwarappa) ಜೊತೆ ದೆಹಲಿಯಲ್ಲಿ ಬುಧವಾರ ರಾತ್ರಿ ನಡೆಸಬೇಕಿದ್ದ ಭೇಟಿಯನ್ನು ದಿಢೀರ್ ಆಗಿ ರದ್ದುಗೊಳಿಸಿದ್ದಾರೆ!
ಕಳೆದೆರೆಡು ದಿನಗಳ ಹಿಂದೆ ಸ್ವತಃ ಅಮಿತ್ ಶಾ ಅವರೇ ಕೆ.ಎಸ್.ಈಶ್ವರಪ್ಪರಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಬಂಡಾಯ ಸ್ಪರ್ಧೆಯಿಂದ (Rebel competition) ಹಿಂದಕ್ಕೆ ಸರಿಯುವಂತೆ ಮನವಿ ಮಾಡಿದ್ದರು. ಬುಧವಾರ ದೆಹಲಿಗೆ (delhi) ಆಗಮಿಸಿ ಭೇಟಿಯಾಗುವಂತೆ ಸೂಚಿಸಿದ್ದರು.
ಈ ವಿಷಯವನ್ನು ಸ್ವತಃ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದ್ದರು. ಅಮಿತ್ ಶಾ ಅವರು ದೂರವಾಣಿ ಮೂಲಕ ತಮ್ಮೊಂದಿಗೆ ಚರ್ಚಿಸಿದ್ದಾರೆ. ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಮನವಿ ಮಾಡಿದ್ದಾರೆ. ಜೊತೆಗೆ ದೆಹಲಿಗೆ ಆಗಮಿಸಿ ತಮ್ಮನ್ನು ಭೇಟಿಯಾಗುವಂತೆ ಹೇಳಿದ್ದಾರೆ.
ಆದರೆ ಯಾವುದೇ ಕಾರಣಕ್ಕೂ ತಾವು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಿಲ್ಲ. ಹಾಗೆಯೇ ದೆಹಲಿಗೆ ತೆರಳಿ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೆನೆ. ಅವರ ಮನವೊಲಿಸುತ್ತೆನೆ. ತಮ್ಮ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸುವಂತೆ ಕೋರುತ್ತೆನೆ ಎಂದು ತಿಳಿಸಿದ್ದರು.
ಅದರಂತೆ ಅಮಿತ್ ಶಾ ಭೇಟಿಯಾಗಲು ಈಶ್ವರಪ್ಪ ಅವರು ಶಿವಮೊಗ್ಗದಿಂದ (shivamogga) ದೆಹಲಿಗೆ ತೆರಳಿದ್ದರು. ಬುಧವಾರ ರಾತ್ರಿ 10 ಗಂಟೆಗೆ ಭೇಟಿ ನಿಗದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಈಶ್ವರಪ್ಪ ಜೊತೆಗಿನ ಭೇಟಿಯನ್ನು ಅಮಿತ್ ಶಾ ರದ್ದುಗೊಳಿಸಿದ್ದಾರೆ (cancled). ಮತ್ತೊಂದೆಡೆ, ಈಶ್ವರಪ್ಪ ದೆಹಲಿಯಿಂದ ಶಿವಮೊಗ್ಗಕ್ಕೆ ಹಿಂದಿರುಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕುತೂಹಲ : ಹಾವೇರಿ (haveri) ಲೋಕಸಭಾ ಕ್ಷೇತ್ರದಲ್ಲಿ ಪುತ್ರ ಕೆ.ಇ.ಕಾಂತೇಶ್ (kantesh) ಗೆ ಬಿಜೆಪಿ ಟಿಕೆಟ್ ಕೈತಪ್ಪಿದ ನಂತರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತವರ ಪುತ್ರರ ವಿರುದ್ದ ಕೆ.ಎಸ್.ಈಶ್ವರಪ್ಪ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಈಶ್ವರಪ್ಪ ಮನವೊಲಿಕೆಗೆ ಬಿಜೆಪಿ ನಾಯಕರು ನಡೆಸಿದ ಪ್ರಯತ್ನಗಳು ಫಲ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ಮೂಲಕ ಮನವೊಲಿಸುವ ಕೊನೆಯ ಯತ್ನ ನಡೆಸಲಾಗಿತ್ತು. ಆದರೆ ಈಶ್ವರಪ್ಪ ಅವರು ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದಿಂದ ಹಿಂದಕ್ಕೆ ಸರಿಯದಿರುವ ಬಿಗಿ ನಿಲುವು ತಳೆದಿದ್ದಾರೆ.
ಒಂದು ವೇಳೆ ಈಶ್ವರಪ್ಪರೊಂದಿಗಿನ ಮಾತುಕತೆ ಫಲಪ್ರದವಾಗದಿದ್ದರೆ ನಕಾರಾತ್ಮಕ ಸಂದೇಶ ರವಾನಿಯಾಗುವ ಸಾಧ್ಯತೆಗಳ ಕಾರಣದಿಂದ ಅಮಿತ್ ಶಾ ಅವರು ಕೊನೆ ಕ್ಷಣದಲ್ಲಿ ಈಶ್ವರಪ್ಪ ಭೇಟಿಯಾಗಲು ಮುಂದಾಗಿಲ್ಲ ಎಂದು ಹೇಳಲಾಗುತ್ತಿದೆ.
ಸಂಧಾನ ಕ್ಲೋಸ್ : ಈಗಾಗಲೇ ಈಶ್ವರಪ್ಪರ ಜೊತೆ, ಬಿಜೆಪಿ ಹಲವು ಹಿರಿಯ ನಾಯಕರು ಮನವೊಲಿಕೆಯ ಯತ್ನ ನಡೆಸಿದ್ದರು. ಆದರೆ ಅವರು ಮಾತ್ರ ತಮ್ಮ ಪಟ್ಟು ಸಡಿಲಿಸಿರಲಿಲ್ಲ. ಕೊನೆಯದಾಗಿ ಅಮಿತ್ ಶಾ ಮೂಲಕ ಮನವೊಲಿಕೆಯ ಪ್ರಯತ್ನ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅಮಿತ್ ಶಾ ಅವರು ಈಶ್ವರಪ್ಪ ಭೇಟಿ ರದ್ದುಗೊಳಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಇನ್ನು ಮುಂದೆ ಈಶ್ವರಪ್ಪರೊಂದಿಗೆ ಯಾವುದೇ ರೀತಿಯ ಸಂಧಾನ ಮಾತುಕತೆ ನಡೆಸದಿರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ಬಿಜೆಪಿ ಪಕ್ಷದ ಉನ್ನತ ಮೂಲಗಳು ಮಾಹಿತಿ ನೀಡುತ್ತವೆ.