
ಲಾಡ್ಜ್ ನಲ್ಲಿ ಕೊಲೆಗೀಡಾದ ಮಹಿಳೆ ಶವ ಪತ್ತೆ : ವಾರಸುದಾರರ ಪತ್ತೆಗೆ ಸಹಕರಿಸಲು ಪೊಲೀಸರ ಮನವಿ
ಶಿವಮೊಗ್ಗ (shivamogga), ಏ. 6: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆ (Thirthahalli Taluk hanagerekatte) ಗ್ರಾಮದ ಲಾಡ್ಜ್ ವೊಂದರಲ್ಲಿ, ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಮಹಿಳೆಯ ವಾರಸುದಾರರ ಪತ್ತೆಗೆ ಸಹಕರಿಸುವಂತೆ ಮಾಳೂರು ಠಾಣೆ ಪೊಲೀಸರು (malur police station) ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಪೊಲೀಸರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಹಣಗೆರೆಕಟ್ಟೆಯ ಸೈಯದ್ ಸಾದತ್ ದರ್ಗಾ ಸಮೀಪದಲ್ಲಿರುವ ಹಬೀಬುಲ್ಲಾ ಎಂಬುವರಿಗೆ ಸೇರಿದ ಲಾಡ್ಜ್ ನ (lodge) ಕೊಣೆಯೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು.
ಹರಿತವಾದ ಚೂರಿಯಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದು ಕಂಡುಬಂದಿತ್ತು. ಇಡೀ ಕೋಣೆ ರಕ್ತಮಯವಾಗಿದ್ದುದು ಹತ್ಯೆಯ ಭೀಕರತೆಗೆ ಸಾಕ್ಷಿಯಾಗಿತ್ತು. ಮಹಿಳೆಯ ವಿಳಾಸ, ಹೆಸರು ಸೇರಿದಂತೆ ಯಾವುದೇ ವಿವರಗಳು ಪತ್ತೆಯಾಗಿರಲಿಲ್ಲ.
ಚಹರೆ : ಮೃತ ಮಹಿಳೆಗೆ ಸುಮಾರು 30 ರಿಂದ 35 ವರ್ಷ ವಯೋಮಾನವಿದೆ. 5.3 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದಾರೆ. ಕಿವಿಯಲ್ಲಿ ಕೆಂಪು ಹರಳಿನ ಬೆಂಡೋಲೆ, ಎಡಭಾಗದ ಮೂಗಿನಲ್ಲಿ ರಿಂಗ್, ಕತ್ತಿನಲ್ಲಿ ಕರಿಮಣಿ ಸರ ಹಾಗೂ ಕಾಲು ಬೆರಳಿನಲ್ಲಿ ಕಾಲುಂಗರ ಇರುತ್ತದೆ. ಗಿಳಿ ಹಸಿರು ಬಣ್ಣದ ಚೂಡಿದಾರ್, ಕೆಂಪು ಬಣ್ಣದ ವೇಲ್ ಧರಿಸಿದ್ದಾರೆ.
ಮೃತ ಮಹಿಳೆಯ ವಿಳಾಸ ಮತ್ತು ವಾರಸುದಾರರು ಪತ್ತೆಯಾದಲ್ಲಿ ಮಾಳೂರು ಪೊಲೀಸ್ ಠಾಣೆ ಅಥವಾ ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ (shimoga police control room), ದೂ.ಸಂ.: 08182-261413 / 9480803300/ 08181-235142/228310/ 9480803353/9480803333/ 9480803340 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.