
ಕೆ.ಎಸ್.ಈಶ್ವರಪ್ಪ, ಗೀತಾ ಶಿವರಾಜಕುಮಾರ್ ವಿರುದ್ದ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು : ಕಾರಣವೇನು?
ಬೆಂಗಳೂರು / ಶಿವಮೊಗ್ಗ, ಏ. 11: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ಬಿಸಿಲ ಧಗೆಯಷ್ಟೆ ಕಾವೇರಲಾರಂಭಿಸಿದೆ. ಈ ನಡುವೆ ರಾಜ್ಯ ಬಿಜೆಪಿ (bjp) ಪಕ್ಷವು, ಸ್ವತಂತ್ರವಾಗಿ ಕಣಕ್ಕಿಳಿದಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (k s eshwarappa) ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ (geetha shivarajkumar) ಅವರ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಮೋದಿ ಪೋಟೋ ಬಳಕೆ : ಕೆ.ಎಸ್.ಈಶ್ವರಪ್ಪರವರು ಪ್ರಚಾರದ ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿ (narendra modi) ಅವರ ಭಾವಚಿತ್ರ ಬಳಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಬಿಜೆಪಿ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಕೆ.ಎಸ್.ಈಶ್ವರಪ್ಪರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು. ಬಿಜೆಪಿಯೇತರ ಯಾವುದೇ ನಾಯಕರು ಮೋದಿ ಹೆಸರು ಹಾಗೂ ಭಾವಚಿತ್ರ ಬಳಸದಂತೆ ಎಚ್ಚರಿಕೆ ನೀಡಬೇಕು ಎಂದು ದೂರಿನಲ್ಲಿ ಆಗ್ರಹಿಸಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ (shimoga loksabha constituency) ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರರನ್ನು (b y raghavendra) ಕಣಕ್ಕಿಳಿಸಲಾಗಿದೆ. ಅದೇ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಕೆ.ಎಸ್.ಈಶ್ವರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು, ಭಾವಚಿತ್ರ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿದ್ದಾರೆ. ಜೊತೆಗೆ ಬಿಜೆಪಿ ಭಾಗವೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಮತದಾರರನ್ನು ಗೊಂದಲಕ್ಕೆ ದೂಡುತ್ತಿದ್ದಾರೆ ಎಂದು ದೂರಿನಲ್ಲಿ (complaint) ತಿಳಿಸಿದೆ.
ಚುನಾವಣಾ ವೆಚ್ಚ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ನಿರ್ಮಾಪಕರಾಗಿರುವ ‘ಭೈರತಿ ರಣಗಲ್’ (bhairathi ranagal) ಚಲನಚಿತ್ರದ ಜಾಹೀರಾತು ಮೊತ್ತವನ್ನು, ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು ಎಂದು ಬಿಜೆಪಿ ಪಕ್ಷ ಚುನಾವಣಾ ಆಯೋಗಕ್ಕೆ (election commission) ದೂರು ಸಲ್ಲಿಸಿದೆ.
ಗೀತಾ ಅವರ ಪತಿ ನಟ ಶಿವರಾಜಕುಮಾರ್ (actor shivarajkumar) ಅವರು ‘ಭೈರತಿ ರಣಗಲ್’ ಚಿತ್ರದಲ್ಲಿ ನಟಿಸಿದ್ಧಾರೆ. ಇತ್ತೀಚೆಗೆ ಸದರಿ ಸಿನಿಮಾದ ಜಾಹೀರಾತು ಬಿಡುಗಡೆ ಮಾಡಲಾಗಿತ್ತು. ಜಾಹೀರಾತಿಗೆ ಬಿಡುಗಡೆ ಮಾಡಿದ ವೆಚ್ಚವನ್ನು ಅಭ್ಯರ್ಥಿ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು ಎಂಬುವುದು ಬಿಜೆಪಿ ಪಕ್ಷದ ಆಗ್ರಹವಾಗಿದೆ.
ಈ ಹಿಂದೆ ನಟ ಶಿವರಾಜಕುಮಾರ್ ಅವರ ನಟನೆಯ ಸಿನಿಮಾ, ಟಿವಿ ಶೋ, ಜಾಹೀರಾತುಗಳ ಪ್ರದರ್ಶನಕ್ಕೆ ನಿರ್ಬಂಧ ಹಾಕುವಂತೆ ಬಿಜೆಪಿ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಆದರೆ ಇದಕ್ಕೆ ತಡೆ ಹಾಕಲು ಆಯೋಗ ನಿರಾಕರಿಸಿತ್ತು. ಇದೀಗ ಬಿಜೆಪಿ ಪಕ್ಷ ಗೀತಾ ಶಿವರಾಜಕುಮಾರ್ ವಿರುದ್ದ ದೂರು ನೀಡಿದೆ.