
ಶಿವಮೊಗ್ಗ ಲೋಕಸಭಾ ಕ್ಷೇತ್ರ : ಕೆ.ಎಸ್.ಈಶ್ವರಪ್ಪ ನಾಮಪತ್ರ ಸಲ್ಲಿಕೆ
ಶಿವಮೊಗ್ಗ (shivamogga), ಏ. 12: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (Shimoga Lok Sabha Constituency) ಚುನಾವಣಾ ಕಣ ರಂಗೇರಲಾರಂಭಿಸಿದೆ. ಪಕ್ಷೇತರ (independent) ಅಭ್ಯರ್ಥಿಯಾಗಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ (k s eshwarappa) ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆದ ಡಿಸಿ ಗುರುದತ್ತ ಹೆಗಡೆ ಅವರಿಗೆ ಕೆ.ಎಸ್.ಈಶ್ವರಪ್ಪ ಅವರು ಉಮೇದುವಾರಿಕೆ ಅರ್ಜಿ (nomination paper) ಸಲ್ಲಿಸಿದರು. ಈ ವೇಳೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಕೆ.ಎಸ್.ಈಶ್ವರಪ್ಪ ಪತ್ನಿ ಸೇರಿದಂತೆ ಇತರರಿದ್ದರು.
ಶಕ್ತಿ ಪ್ರದರ್ಶನ : ನಾಮಪತ್ರ ಸಲ್ಲಿಕೆಗೂ ಮುನ್ನ ಕೆ.ಎಸ್.ಈಶ್ವರಪ್ಪ ಅವರು ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಆಗಮಿಸಿದರು. ವಾಹನಕ್ಕೆ ಮೋದಿ (modi) ಹಾಗೂ ಈಶ್ವರಪ್ಪ ಅವರ ಭಾವಚಿತ್ರವಿದ್ದ ಬೃಹತ್ ಫ್ಲೆಕ್ಸ್ ಹಾಕಲಾಗಿತ್ತು.
ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರು ಭಾಗವಹಿಸಿದ್ದರು. ನಾಮಪತ್ರ ಸಲ್ಲಿಕೆಗೆ ಸಮಯ ವಿಳಂಬವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಮೆರವಣಿಗೆಯಿಂದ ಅರ್ಧಕ್ಕೆ ನಿರ್ಗಮಿಸಿದ ಈಶ್ವರಪ್ಪ ಅವರು ಕಾರಿನಲ್ಲಿ ಡಿಸಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಂತರ ಮೆರವಣಿಗೆಯಲ್ಲಿ ಭಾಗಿಯಾದರು.
ಬೆಂಬಲಿಗರ ಮೂಲಕವೂ ಸಲ್ಲಿಕೆ : ಇದಕ್ಕೂ ಮುನ್ನ ಕೆ.ಎಸ್.ಈಶ್ವರಪ್ಪ ಅವರು ಬೆಂಬಲಿಗರ ಮೂಲಕವೂ ಒಂದು ಸೆಟ್ ಉಮೇದುವಾರಿಕೆ ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು. ಅವರ ಬೆಂಬಲಿಗ ಹಾಗೂ ಸೂಚಕರಾದ ವಿಶ್ವಾಸ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಾಗಿತ್ತು.
ಗೆಲ್ಲುವ ವಿಶ್ವಾಸ : ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, ಇಂದಿನ ನಾಮಪತ್ರ ಸಲ್ಲಿಕೆಗೆ ಕ್ಷೇತ್ರದ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಬೆಂಬಲಿಗರು ಆಗಮಿಸಿದ್ದರು. ಶಿವಮೊಗ್ಗ ಕ್ಷೇತ್ರದಲ್ಲಿ ತಮ್ಮ ಗೆಲುವು ನಿಶ್ಚಿತವಾಗಿದೆ ಎಂದು ತಿಳಿಸಿದ್ದಾರೆ.
ಬಂಡಾಯ : ಹಾವೇರಿ (haveri) ಲೋಕಸಭಾ ಕ್ಷೇತ್ರದಲ್ಲಿ ಪುತ್ರ ಕೆ.ಇ.ಕಾಂತೇಶ್ ಗೆ (k e kantesh) ಬಿಜೆಪಿ (bjp) ಟಿಕೆಟ್ ಸಿಗದಕ್ಕೆ ಮುನಿಸಿಕೊಂಡಿದ್ದ ಕೆ.ಎಸ್.ಈಶ್ವರಪ್ಪ ಅವರು, ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಬಿ.ಎಸ್.ಯಡಿಯೂರಪ್ಪ (b s yediyurappa) ಪುತ್ರ ಬಿ.ವೈ.ರಾಘವೇಂದ್ರ (b y raghavendra) ಪರಾಭವಗೊಳಿಸುವ ಘೊಷಣೆ ಮಾಡಿದ್ದಾರೆ.