
‘ಮೋದಿ ಮುಖ ಕಂಡರೇ ನಿದ್ರೆಯಲ್ಲಿಯೂ ಬೆಚ್ಚಿ ಬೀಳುವ ಕಾಂಗ್ರೆಸ್ಸಿಗರು!’ : ಹೆಚ್.ಡಿ.ಕುಮಾರಸ್ವಾಮಿ ಲೇವಡಿ
ಶಿವಮೊಗ್ಗ, ಫೆ. 22: ನರೇಂದ್ರ ಮೋದಿ ಮುಖ ನೋಡಿದರೆ ಕಾಂಗ್ರೆಸ್ಸಿಗರು ನಿದ್ರೆಯಲ್ಲಿಯೂ ಬೆಚ್ಚಿ ಬೀಳುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ನಾಯಕ ಸುರ್ಜಿವಾಲ ಅವರು, ಜೆಡಿಎಸ್ ನಾಯಕರ ಮುಖವಾಡ ಕಳಚಿದರೆ ನರೇದ್ರ ಮೋದಿ ಕಾಣುತ್ತಾರೆ ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿ ಹೊರತುಪಡಿಸಿ ಬೇರೆ ಯಾರು ಕಾಣುವುದಿಲ್ಲ. ಮೋದಿ ಭಜನೆ ಬಿಟ್ಟರೆ ಕಾಂಗ್ರೆಸ್ಸಿಗರಿಗೆ ಬೇರೆ ವಿಷಯವಿಲ್ಲವಾಗಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಸುರ್ಜಿವಾಲ ಅವರಿಗೆ ತಾವು ಈ ಹಿಂದೆ ಬಹಿರಂಗವಾಗಿಯೇ ಸವಾಲು ಹಾಕಿದ್ದೆ. 2009 ರಲ್ಲಿ ಆಪರೇಷನ್ ಕಮಲದಿಂದ 8 ಚುನಾವಣೆಗಳು ನಡೆದಾಗ, ಈಗಿನ ಶಾಸಕಾಂಗ ಪಕ್ಷದ ನಾಯಕರು ಆಗ ಸುಪಾರಿ ಪಡೆದಿದ್ದ ಮೊತ್ತವೆಷ್ಟು ಎಂಬುವುದನ್ನು ಬಹಿರಂಗವಾಗಿ ಹೇಳಲಿ. ಈ ಕುರಿತಂತೆ ತಾವು ಬಹಿರಂಗವಾಗಿ ಚರ್ಚೆಗೆ ಸಿದ್ದ ಎಂದು ಹೇಳಿದ್ದೆ. ಆದರೆ ಅವರು ಚರ್ಚೆಗೆ ಬರಲಿಲ್ಲ ಎಂದರು.
ಸುರ್ಜಿವಾಲ ಅವರಿಗೆ ನಾಚಿಕೆಯಾಗಬೇಕು. ಬಿಜೆಪಿ ಬಿ ಟೀಂ ಜೆಡಿಎಸ್ಸೋ ಅಥವಾ ಕಾಂಗ್ರೆಸ್ಸೋ ಎಂಬುವುದನ್ನು ಜನ ಮಾತನಾಡುತ್ತಾರೆ. ಜೆಡಿಎಸ್ ಬಿಜೆಪಿ ಬಿ ಟೀಂ ಎಂದು ಹೇಳಲು ನಿಮಗೆ ಎಷ್ಟು ನೈತಿಕತೆಯಿದೆ. ಎಚ್ಚರಿಕೆಯಿಂದ ಮಾತನಾಡಿ ಎಂದು ಸುರ್ಜಿವಾಲಗೆ ತಾಕೀತು ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಕೊನೆಯ ಹಂತದಲ್ಲಿದೆ. ಈ ರೀತಿಯ ಮಾತುಗಳಿಂದ ಕಾಂಗ್ರೆಸ್ ಇನ್ನಷ್ಟು ನೆಲಕಚ್ಚಲಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಟೀಕಿಸಿದ್ದಾರೆ.
ಮಾರ್ಚ್ 20 ರವರೆಗೆ ಪಂಚರತ್ನ ಯಾತ್ರೆ ನಡೆಯಲಿದೆ. ಯಾತ್ರೆಗೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಇದೆ ವೇಳೆ ತಿಳಿಸಿದ್ದಾರೆ.