
ಖ್ಯಾತ ಚಿತ್ರನಟ ದ್ವಾರಕೀಶ್ ವಿಧಿವಶ
ಬೆಂಗಳೂರು (bengaluru), ಏ. 16: ಕನ್ನಡ ಚಲನಚಿತ್ರರಂಗದ (sandalwood) ಖ್ಯಾತ ನಟ, ನಿರ್ಮಾಪಕ ದ್ವಾರಕೀಶ್ (dwarakish) ಅವರು ಮಂಗಳವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋ ಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.
ರಾತ್ರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಸರಿಯಾಗಿ ನಿದ್ರೆ ಕೂಡ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಮಲಗಿದ್ದರು. ಬಳಿಕ ಅವರು ಎಚ್ಚರಗೊಳ್ಳಲಿಲ್ಲ. ಮಲಗಿದ್ದಲ್ಲಿಯೇ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ ಎಂದು ದ್ವಾರಕೀಶ್ ಅವರ ಪುತ್ರ ಯೋಗೇಶ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹೆಸರುವಾಸಿ : ಆಗಸ್ಟ್ 19, 1942 ರಂದು ಅವರು ಹುಣಸೂರು ತಾಲೂಕಿನಲ್ಲಿ ಜನಿಸಿದ್ದರು. ಸಿನಿಮಾ (film) ರಂಗಕ್ಕೆ ಆಗಮಿಸುವ ಮುನ್ನ ಅವರು ಉದ್ಯಮದಲ್ಲಿ ತೊಡಗಿಸಿದ್ದರು. 1963 ರಲ್ಲಿ ವ್ಯಾಪಾರ ತೊರೆದು ಸಿನಿಮಾ ನಟನ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ‘ವೀರ ಸಂಕಲ್ಪ’ ಸಿನಿಮಾದ ಮೂಲಕ ನಟನೆ ಪ್ರಾರಂಭಿಸಿದ್ದರು.
ನಾಯಕರಾಗಿ, ಹಾಸ್ಯ, ಪೋಷಕ ಪಾತ್ರಗಳ ಮೂಲಕ ಸಿನಿಮಾ ಪ್ರಿಯರ ಮನಗೆದ್ದಿದ್ದರು. ಕನ್ನಡ ಚಲನಚಿತ್ರರಂಗದಲ್ಲಿ (Kannada film industry) ಸಾಕಷ್ಟು ಹೆಸರು ಸಂಪಾದಿಸಿದ್ದರು. ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಾಗೆಯೇ 40 ಕ್ಕೂ ಅಧಿಕ ಸಿನಿಮಾಗಳ ನಿರ್ದೇಶನ (director) ಮಾಡಿದ್ದ ಅವರು ಸಾಕಷ್ಟು ಏರಿಳಿತ ಕಂಡಿದ್ದರು. ರಾಜಾಕುಳ್ಳ ಎಂದೇ ಹೆಸರು ಸಂಪಾದಿಸಿದ್ದರು.