
ಧರ್ಮ, ಜಾತಿ, ಭಾಷೆಯ ರಾಜಕೀಯ ದಾಳ : ಮತಗಳಿಕೆಗೆ ನಾನಾ ತಂತ್ರ – ಪ್ರತಿತಂತ್ರ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಏ. 24: ಶಿವಮೊಗ್ಗ ಲೋಕಸಭಾ ಕ್ಷೇತ್ರ (shimoga loksabha constituency) ಮತ್ತೊಮ್ಮೆ ಹೈವೋಲ್ಟೇಜ್ ಹಣಾಹಣಿಗೆ ವೇದಿಕೆಯಾಗಿದೆ. ಮೂರು ಪ್ರಮುಖ ರಾಜಕೀಯ ಕುಟುಂಬಗಳ ಜಿದ್ದಾಜಿದ್ದಿಗೆ ವೇದಿಕೆಯಾಗಿದೆ. ಇದರಿಂದ ಚುನಾವಣಾ (loksabha election) ಕಣ ದಿನದಿಂದ ದಿನಕ್ಕೆ ಕಾವೇರಲಾರಂಭಿಸಿದೆ. ಪ್ರಚಾರದ ಅಬ್ಬರ ಮುಗಿಲು ಮುಟ್ಟಲಾರಂಭಿಸಿದೆ.
ಕ್ಷೇತ್ರದಲ್ಲಿ ಒಟ್ಟಾರೆ 23 ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಇದರಲ್ಲಿ ಬಿಜೆಪಿಯಿಂದ (bjp) ಹಾಲಿ ಸಂಸದ ಬಿ.ವೈ.ರಾಘವೇಂದ್ರ (b y raghavendra), ಕಾಂಗ್ರೆಸ್ (congress) ನಿಂದ ಗೀತಾ ಶಿವರಾಜಕುಮಾರ್ (geetha shivarajakumar) ಹಾಗೂ ಪಕ್ಷೇತರವಾಗಿ ಮಾಜಿ ಡಿಸಿಎಂ, ಬಿಜೆಪಿಯಿಂದ ಉಚ್ಚಾಟಿತರಾಗಿರುವ ಕೆ.ಎಸ್.ಈಶ್ವರಪ್ಪ (k s eshwarappa) ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.
ಮೂವರು ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಕ್ಷೇತ್ರ ಸುತ್ತು ಹಾಕಲಾರಂಭಿಸಿದ್ದಾರೆ. ಮತದಾರರ ಮನವೊಲಿಕೆಗೆ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಜೊತೆಗೆ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಮತದಾರರ ಮನೆಮನೆಗೆ ಎಡತಾಕುತ್ತಿದ್ದಾರೆ.
ತಂತ್ರ – ಪ್ರತಿತಂತ್ರ : ಸದ್ಯದ ಚುನಾವಣಾ ಪ್ರಚಾರದ ಚಿತ್ರಣ ಗಮನಿಸಿದರೆ ಧರ್ಮ (religion), ಜಾತಿ (caste), ಭಾಷಿಕ (language) ಮತಗಳಿಕೆಯ ರಾಜಕೀಯ ಲೆಕ್ಕಾಚಾರಗಳು ಭರ್ಜರಿಯಾಗಿ ನಡೆಯುತ್ತಿರುವುದು ಕಂಡುಬರುತ್ತಿದೆ. ಪ್ರಭಾವಿ ಸಮುದಾಯಗಳ ಮತದಾರರ ಗಮನ ಸೆಳೆಯಲು ತಂತ್ರ – ಪ್ರತಿತಂತ್ರಗಳ ರಾಜಕೀಯ ದಾಳ ಉರುಳಿಸಲಾಗುತ್ತಿದೆ. ಮತಗಳ ಧೃವೀಕರಣಕ್ಕೆ ಯತ್ನಿಸಲಾಗುತ್ತಿದೆ.
ಕೆಲ ಪಕ್ಷಗಳು ಪ್ರಭಾವಿ ಸಮುದಾಯಗಳ ನಾಯಕರ ಮೂಲಕ ಪ್ರಚಾರ ನಡೆಸಲು ಮುಂದಾಗಿವೆ. ಈಗಾಗಲೇ ಕೆಲ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಇದರಿಂದ ಜಾತಿ-ಧರ್ಮ-ಭಾಷಿಕ ಮತಗಳಿಕೆಯ ಲೆಕ್ಕಾಚಾರಗಳು ಕ್ಷೇತ್ರದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.
ಬಿರುಸು : ಇದೆಲ್ಲದರ ನಡುವೆ, ರಾಜಕೀಯ ನಾಯಕರ ನಡುವೆ ಆರೋಪ – ಪ್ರತ್ಯಾರೋಪಗಳು ದಿನ ಕಳೆದಂತೆ ಕಾವೇರಲಾರಂಭಿಸಿದೆ. ಕೆಲ ನಾಯಕರು ವೈಯಕ್ತಿಕ ಮಟ್ಟಕ್ಕೆ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಸೋಶಿಯಲ್ ಮೀಡಿಯಾ : ರಾಜಕೀಯ ನಾಯಕರು – ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಣ್ನು ಚುನಾವಣಾ ಪ್ರಚಾರಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಮುಖ ಅಭ್ಯರ್ಥಿಗಳು ತಾವು ನಡೆಸುವ ಪ್ರಚಾರ, ಸಭೆಗಳ ಪೋಟೋ – ವೀಡಿಯೋ, ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಕಾರ್ಯಕರ್ತರಿಗೆ, ನೆಟ್ಟಿಗರಿಗೆ ರವಾನಿಸುತ್ತಿರುವುದು ಕಂಡುಬರುತ್ತಿದೆ. ಇದಕ್ಕಾಗಿ ಪ್ರತ್ಯೇಕ ತಂಡಗಳೇ ಕಾರ್ಯನಿರ್ವಹಿಸುತ್ತಿರುವುದು ಕಂಡುಬರುತ್ತಿದೆ.
ಒಟ್ಟಾರೆ ಶಿವಮೊಗ್ಗ (shimoga) ಲೋಕಸಭಾ ಕ್ಷೇತ್ರದಲ್ಲಿನ ಪ್ರಚಾರ ಕಣ ರಂಗೇರಿದೆ. ಮತದಾರರ (voters) ಗಮನ ಸೆಳೆಯಲು ಭಾರೀ ರಾಜಕೀಯ ಹೈಡ್ರಾಮಾಗಳೇ ನಡೆಯಲಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಏನೆಲ್ಲ ರಾಜಕೀಯ ದಾಳಗಳು ಉರುಳಲಿವೆಯೋ ಇನ್ನಷ್ಟೆ ಕಾದು ನೋಡಬೇಕಾಗಿದೆ.