
ಶಿವಮೊಗ್ಗದಲ್ಲಿ ಮುಂದುವರಿದ ಭಾರೀ ಮಳೆ : ಕೆರೆಯಂತಾದ ರಸ್ತೆಗಳು – ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ?
ವರದಿ : ಬಿ.ರೇಣುಕೇಶ್
ಶಿವಮೊಗ್ಗ (shivamogga), ಮೇ 20: ಶಿವಮೊಗ್ಗ ನಗರದಲ್ಲಿ ಮುಂಗಾರು ಪೂರ್ವ ಮಳೆಯ (pre monsoon rain) ಅಬ್ಬರ ಮುಂದುವರಿದಿದೆ. ಸೋಮವಾರ ಸಂಜೆ ನಗರ ಸೇರಿದಂತೆ ಹೊರವಲಯದ ಪ್ರದೇಶಗಳಲ್ಲಿ, ಸರಿಸುಮಾರು 1 ಗಂಟೆಗೂ ಅಧಿಕ ಕಾಲ ಭಾರೀ ವರ್ಷಧಾರೆಯಾಯಿತು.
ಎಡೆಬಿಡದೆ ಸುರಿದ ಮಳೆಗೆ ಹಲವೆಡೆ ಚರಂಡಿ, ರಾಜಕಾಲುವೆಗಳು ಉಕ್ಕಿ ಹರಿದವು. ಇದರಿಂದ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿತ್ತು. ಹಾಗೆಯೇ ಹಲವೆಡೆ ರಸ್ತೆಗಳು ಸಂಪೂರ್ಣ ಜಲಮಯವಾಗಿದ್ದವು. ಅಕ್ಷರಶಃ ಕೆರೆಯಂತಾಗಿ ಪರಿವರ್ತಿತವಾಗಿದ್ದವು. ಇದರಿಂದ ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿತ್ತು.
ಕಳೆದ ಹಲವು ತಿಂಗಳುಗಳಿಂದ ನಗರವು ಬಿರು ಬಿಸಿಲಿಗೆ (temprature) ಸಾಕ್ಷಿಯಾಗಿತ್ತು. ಮಳೆ ಕಣ್ಮರೆಯಾಗಿತ್ತು. ಆದರೆ ಕಳೆದೊಂದು ವಾರದಿಂದ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಬಿಸಿಲ ಬೇಗೆಯ ನಡುವೆಯೇ ಭಾರೀ ಮಳೆಯಾಗುತ್ತಿದೆ. ಇದು ನಾಗರೀಕರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಆದರೆ ಭಾರೀ ಮಳೆಗೆ ನಗರದ ಕೆಲ ತಗ್ಗು ಪ್ರದೇಶಗಳಲ್ಲಿ ಜಲಾವೃತ ಸಮಸ್ಯೆ ( Water logging problem in low lying areas) ಎದುರಾಗುತ್ತಿರುವುದು ನಾಗರೀಕರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ನಾನಾ ರೀತಿಯ ಸಮಸ್ಯೆ ಎದುರಿಸುವಂತಾಗಿದೆ. ಭಾನುವಾರದಂತೆ ಸೋಮವಾರ ಕೂಡ ಹಲವೆಡೆ ಮಳೆ ನೀರು ಕಟ್ಟಡಗಳಿಗೆ ನುಗ್ಗಿರುವ ಮಾಹಿತಿಗಳು ಬಂದಿವೆ.
ಗಮನಹರಿಸಲಿ : ಶಿವಮೊಗ್ಗ ನಗರದ (shimoga city) ಕೆಲ ಮುಖ್ಯ ರಸ್ತೆ ಹಾಗೂ ಬಡಾವಣೆಗಳಲ್ಲಿ, ಈ ಹಿಂದೆ ನಡೆಸಿದ ಅಭಿವೃದ್ದಿ ಕಾಮಗಾರಿಗಳೇ ಜಲಾವೃತ ಸಮಸ್ಯೆಗೆ ಮೂಲ ಕಾರಣವಾಗಿದೆ. ಅವೈಜ್ಞಾನಿಕ ಕಾಮಗಾರಿಗಳಿಂದ (Unscientific works) ಭಾರೀ ಮಳೆಯಾದ ವೇಳೆ ಸರಾಗವಾಗಿ ಮಳೆ ನೀರು ಹರಿದು ಹೋಗುತ್ತಿಲ್ಲ.
ಇದರಿಂದ ಮುಖ್ಯ ರಸ್ತೆಗಳು (main roads) ಕೆರೆಯಂತಾಗಿ ಪರಿವರ್ತಿತವಾಗುತ್ತಿವೆ. ತಗ್ಗು ಪ್ರದೇಶಗಳು ಜಲಾವೃತವಾಗುತ್ತಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿದೆ.
ಮುಂಗಾರು ಮಳೆ ಆರಂಭಕ್ಕೂ ಮುನ್ನ ಮಹಾನಗರ ಪಾಲಿಕೆ (city corporation) ಹಾಗೂ ಸ್ಮಾರ್ಟ್ ಸಿಟಿ (smart city) ಆಡಳಿತ ಎಚ್ಚೆತ್ತುಕೊಳ್ಳಬೇಕು. ಜಲಾವೃತವಾಗುವ ಪ್ರದೇಶಗಳನ್ನು ಗುರುತಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು. ಚರಂಡಿ, ರಾಜಕಾಲುವೆಗಳನ್ನು ಸುವ್ಯವಸ್ಥಿತವಾಗಿಡುವ ಕಾರ್ಯ ನಡೆಸಬೇಕಾಗಿದೆ ಎಂಬುವುದು ನಾಗರೀಕರ ಸಲಹೆಯಾಗಿದೆ.
ಒಟ್ಟಾರೆ ಬೇಸಿಗೆ ಬಿಸಿಲಿಗೆ ತತ್ತರಿಸಿದ್ದ ಶಿವಮೊಗ್ಗ ನಗರಕ್ಕೆ, ಕಳೆದೊಂದು ವಾರದಿಂದ ಬೀಳುತ್ತಿರುವ ಭಾರೀ ವರ್ಷಧಾರೆಯುವ ತಣ್ಣನೆ ವಾತಾವರಣ ನೆಲೆಸುವಂತೆ ಮಾಡಿರುವುದಂತೂ ಸತ್ಯವಾಗಿದೆ.