
ಬ್ಯಾಂಕಿಂಗ್ ಅಪ್ಲಿಕೇಷನ್ ಮೂಲಕ ಬ್ಯಾಂಕ್ ಖಾತೆಗಳಿಂದ ಹಣ ವಂಚನೆ : ಪೊಲೀಸ್ ಇಲಾಖೆ ಎಚ್ಚರಿಕೆ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಮೇ 22: ಸೈಬರ್ ವಂಚಕರು ನಾನಾ ರೀತಿಯಲ್ಲಿ ನಾಗರೀಕರನ್ನು ವಂಚಿಸುತ್ತಿದ್ದಾರೆ. ಇದೀಗ ಬ್ಯಾಂಕಿಂಗ್ ಅಪ್ಲೀಕೇಷನ್ಸ್ ಗಳ (bangking applications) ಮೂಲಕ, ಬ್ಯಾಂಕ್ ಖಾತೆಗಳಿಂದ ನೇರವಾಗಿ ತಮ್ಮ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರಲಾರಂಭಿಸಿವೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ (shimoga police dept) ಮೇ 21 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಸೈಬರ್ ವಂಚಕರ ಹೊಸ ರೀತಿಯ ಮೋಸದ ಕುರಿತಂತೆ ಮಾಹಿತಿ ನೀಡಿದೆ. ಯಾವುದೇ ಬ್ಯಾಂಕಿಂಗ್ ಅಪ್ಲಿಕೇಷನ್ ಗಳನ್ನು ಮೊಬೈಲ್ ಪೋನ್ ಗೆ (mobile phone) ಡೌನ್’ಲೋಡ್ (download) ಮಾಡುವ ಮುನ್ನ ಎಚ್ಚರವಿರಲಿ ಎಂದು ಸಲಹೆ ನೀಡಿದೆ.
ವಂಚನೆಯ ರೀತಿ : ‘ಕೆಲವು ದಿನಗಳಿಂದ ಸೈಬರ್ ವಂಚಕರು ಬ್ಯಾಂಕ್ ಗಳ ನೈಜ ಲೋಗೋಗಳನ್ನು ಬಳಸಿಕೊಂಡು ವ್ಯಾಟ್ಸಾಪ್, ಟೆಲಿಗ್ರಾಂ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರಿಗೆ ಸಿ.ಎಸ್.ಪಿ / CSP (ಕಸ್ಟಮರ್ ಸರ್ವಿಸ್ ಪಾಯಿಂಟ್) ಎಂಬ ನಕಲಿ ಮೊಬೈಲ್ ಎಪಿಕೆ / APK (ಮೊಬೈಲ್ ಅಪ್ಲೀಕೇಷನ್) ಫೈಲ್ ಗಳನ್ನು (Files) ರವಾನಿಸುತ್ತಿದ್ದಾರೆ.
ಇದನ್ನು ನಿಮ್ಮ ಮೊಬೈಲ್ ಪೋನ್ ನಲ್ಲಿ ಇನ್’ಸ್ಟಾಲ್ (install) ಮಾಡಿಕೊಂಡು ಆಧಾರ್ ಕೆವೈಸಿ (KYC), ಪಾನ್ ಕಾರ್ಡ್ ವಿವರ, ಸಿಮ್ ಕಾರ್ಡ್ ನಂಬರ್ ಅಪ್’ಡೇಟ್ (update) ಮಾಡುವಂತೆ ತಿಳಿಸುತ್ತಿದ್ದಾರೆ. ಈ ರೀತಿಯ ಅಪ್ಲಿಕೇಷನ್ ಇನ್’ಸ್ಟಾಲ್ ಮಾಡಿಕೊಂಡು ಮಾಹಿತಿ ಅಪ್’ಡೇಟ್ ಮಾಡಿದ ಗ್ರಾಹಕರ ಬ್ಯಾಂಕ್ ಖಾತೆಗಳಿಂದ, ಸೈಬರ್ ವಂಚಕರು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಳ್ಳುತ್ತಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಗ್ರಾಹಕರು ಈ ರೀತಿಯ ಅಪ್ಲಿಕೇಷನ್ ಡೌನ್’ಲೋಡ್ ಮಾಡಿಕೊಂಡಿದ್ದರೆ ಮೊದಲು ಮೊಬೈಲ್ ಪೋನ್ ನಲ್ಲಿ ಇಂಟರ್ ನೆಟ್ ಆಫ್ ಮಾಡಬೇಕು. ನಂತರ ಪೋನ್ ಸೆಟ್ಟಿಂಗ್ಸ್ ವಿಭಾಗಕ್ಕೆ ತೆರಳಿ ‘app management / APPS‘ ನಲ್ಲಿ ಡೌನ್’ಲೋಡ್ ಪರಿಶೀಲಿಸಬೇಕು. ಅಪರಿಚಿತ ಫೈಲ್ಸ್ ಗಳಿದ್ದರೆ ಡಿಲೀಟ್ ಮಾಡಬೇಕು. ಹಾಗೆಯೇ *#67# ನಂಬರ್ ನ್ನು ಡಯಲ್ ಮಾಡಿ ನಿಮ್ಮ ಮೊಬೈಲ್ ಪೋನ್ ನಂಬರ್ ಬೇರೆ ಯಾವ ಸರ್ವಿಸ್ ಗಳಿಗೆ ಫಾರ್ವರ್ಡ್ (forward) ಇದೆ ಎಂಬುವುದನ್ನು ತಿಳಿದುಕೊಳ್ಳಬಹುದಾಗಿದೆ.
ಸರ್ವಿಸ್ ಗಳಿಗೆ ಫಾರ್ವರ್ಡ್ ಇದ್ದರೆ ತಕ್ಷಣವೇ #002# ನಂಬರ್ ಗೆ ಡಯಲ್ ಮಾಡಿದ್ದಲ್ಲಿ ಎಲ್ಲ ಸರ್ವಿಸ್ ಗಳು ಸ್ಥಗಿತಗೊಳ್ಳುತ್ತವೆ. ಯಾವುದೇ ಬ್ಯಾಂಕ್ ನವರು (bank) ಮೊಬೈಲ್ ಫೋನ್ ಅಪ್ಲಿಕೇಷನ್ಸ್ ಗಳ ಮೂಲಕ ವೈಯಕ್ತಿಕ ಮಾಹಿತಿ ಹಾಗೂ ಅಕೌಂಟ್ ವಿವರಗಳನ್ನು ಕೇಳುವುದಿಲ್ಲ.
ಈ ಹಿನ್ನೆಲೆಯಲ್ಲಿ ಗ್ರಾಹಕರು ಯಾವುದೇ ಅನಾಮಧೇಯ ಅಪ್ಲಿಕೇಷನ್ಸ್ ಗಳನ್ನು ಡೌನ್ ಲೋಡ್ ಮಾಡುವ ಮುನ್ನ ಅದರ ಸತ್ಯಾಸತ್ಯತೆ ಪರಿಶೀಲಿಸಬೇಕು. ತದನಂತರವಷ್ಟೆ ಬಳಸಬೇಕು’ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ನಾಗರೀಕರಿಗೆ ಮನವಿ ಮಾಡಿಕೊಂಡಿದೆ.