
ಛತ್ರಿ ಹಿಡಿದು ಬಸ್ ಓಡಿಸಿದ ಚಾಲಕ, ವೀಡಿಯೋ ಮಾಡಿದ ಕಂಡಕ್ಟರ್ ಸಸ್ಪೆಂಡ್!
ಧಾರವಾಡ (dharwad), ಮೇ 25: ಮನರಂಜನೆಗಾಗಿ ಕೆ.ಎಸ್.ಆರ್.ಟಿ.ಸಿ ಬಸ್ (ksrtc bus) ಚಾಲನೆ ಮಾಡುವ ವೇಳೆ ಒಂದು ಕೈಯಲ್ಲಿ ಛತ್ರಿ ಹಿಡಿದು ಬಸ್ ಓಡಿಸಿದ ಚಾಲಕ (driver) ಹಾಗೂ ಇದನ್ನು ವೀಡಿಯೋ ಮಾಡಿದ ಮಹಿಳಾ ಕಂಡಕ್ಟರ್ ನ್ನು (bus conductor) ಅಮಾನತ್ತುಗೊಳಿಸಲಾಗಿದೆ.
ಚಾಲಕ ಹನುಮಂತಪ್ಪ ಕಿಲ್ಲೇದಾರ್ ಹಾಗೂ ಕಂಡಕ್ಟರ್ (ನಿರ್ವಾಹಕಿ) ಅನಿತಾ ಅಮಾನತ್ತುಗೊಂಡ ಸಿಬ್ಬಂದಿಗಳೆಂದು ಗುರುತಿಸಲಾಗಿದೆ. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.
ವೈರಲ್ ವೀಡಿಯೋ : ಧಾರವಾಡದಲ್ಲಿ (dharwad) 23-05-2024 ರಂದು ಸದರಿ ಘಟನೆ ನಡೆದಿತ್ತು. ಉಪ್ಪಿನಬೆಟಗೇರಿಯಿಂದ ಧಾರವಾಡಕ್ಕೆ ಬಸ್ ಆಗಮಿಸುತ್ತಿದ್ದಾಗ ಮಳೆ ಬರುತ್ತಿತ್ತು. ಈ ವೇಳೆ ಚಾಲಕನು ಒಂದು ಕೈಯಲ್ಲಿ ಛತ್ರಿ (umbrella) ಹಿಡಿದು, ಮತ್ತೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ಬಸ್ ಚಲಾಯಿಸಿದ್ದ.
ಇದನ್ನು ಅದೇ ಬಸ್ ನ ಕಂಡಕ್ಟರ್ ಮೊಬೈಲ್ ಪೋನ್ (mobile phone) ನಲ್ಲಿ ವೀಡಿಯೋ ಮಾಡಿಕೊಂಡಿದ್ದರು. ಸದರಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿತ್ತು. ಸರ್ಕಾರಿ ಬಸ್ (govt bus) ಮೇಲ್ಛಾವಣಿ ಸೋರುತ್ತಿದೆ ಎಂದೆಲ್ಲ ನೆಟ್ಟಿಗರು ಸಾರಿಗೆ ಸಂಸ್ಥೆ ವಿರುದ್ದ ಟೀಕಿಸಿದ್ದರು.
ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಈ ಕುರಿತಂತೆ ಮಾಹಿತಿ ಕಲೆ ಹಾಕಿದಾಗ, ಬಸ್ ಮೇಲ್ಛಾವಣಿ ಸೋರುತ್ತಿರಲಿಲ್ಲ. ಮನರಂಜನೆಗಾಗಿ ಚಾಲಕ ಹಾಗೂ ಕಂಡಕ್ಟರ್ ಛತ್ರಿಯ ವೀಡಿಯೋ (video) ಮಾಡಿದ್ದು ಬೆಳಕಿಗೆ ಬಂದಿತ್ತು. ಈ ಕಾರಣದಿಂದ ಸದರಿ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದೆ.