
ಶಿವಮೊಗ್ಗ ಲೋಕಸಭಾ ಕ್ಷೇತ್ರ : ಬಿಜೆಪಿ – ಕಾಂಗ್ರೆಸ್ ನಾಯಕರ ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಫಲಿತಾಂಶ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಮೇ 30: ಲೋಕಸಭೆ ಸಾರ್ವತ್ರಿಕ ಚುನಾವಣೆ – 2024 (loksabha election 2024) ರ ಮತ ಎಣಿಕೆ ಜೂನ್ 4 ರಂದು ನಡೆಯಲಿದ್ದು, ದಿನಗಣನೆ ಆರಂಭವಾಗಿದೆ. ಹೈವೋಲ್ಟೇಜ್ ಹಣಾಹಣಿಗೆ ವೇದಿಕೆಯಾಗಿದ್ದ ಶಿವಮೊಗ್ಗ ಕ್ಷೇತ್ರದಲ್ಲಿ (shimoga constituency), ಯಾರಿಗೆ ವಿಜಯದ ಮಾಲೆ ಬೀಳಲಿದೆ ಎಂಬ ಕುತೂಹಲ ಹಾಗೂ ಬಿರುಸಿನ ಚರ್ಚೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ ನಡೆಯಲಾರಂಭಿಸಿವೆ.
ಚುನಾವಣೆಯಲ್ಲಿ 23 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಪ್ರಮುಖವಾಗಿ ಬಿಜೆಪಿಯ (bjp) ಹಾಲಿ ಸಂಸದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ ನ (congress) ಗೀತಾ ಶಿವರಾಜಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿತ್ತು. ಮತದಾನ ಪೂರ್ವದಲ್ಲಿ ತ್ರಿಕೋನ ಹಣಾಹಣಿ ಲೆಕ್ಕಾಚಾರವಿತ್ತು. ಆದರೆ ಮತದಾನೋತ್ತರ ಚಿತ್ರಣ ಗಮನಿಸಿದರೆ, ಬಿಜೆಪಿ – ಕಾಂಗ್ರೆಸ್ ನಡುವೆ ನೇರ ಫೈಟ್ ಏರ್ಪಟ್ಟಿದೆ ಎಂದು ಹೇಳಲಾಗುತ್ತಿದೆ.
ಆದರೆ ಈ ಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಮುಖ ನಾಯಕರಿಗೆ ಪ್ರತಿಷ್ಠೆಯಾಗಿದೆ. ಅಭ್ಯರ್ಥಿಗಳ ಸೋಲು – ಗೆಲುವು, ಎರಡು ಪಕ್ಷಗಳ ಪ್ರಮುಖ ನಾಯಕರುಗಳ ಭವಿಷ್ಯದ ರಾಜಕೀಯದ ಮೇಲೆ ಪರಿಣಾಮ ಬೀರುವುದು ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (b s yediyurappa) ಕುಟುಂಬಕ್ಕೆ ಶಿವಮೊಗ್ಗ ಕ್ಷೇತ್ರದ ರಿಸಲ್ಟ್ ಅತ್ಯಂತ ಮಹತ್ವದ್ದಾಗಿದೆ. ಪುತ್ರ ಬಿ.ವೈ.ರಾಘವೇಂದ್ರ (b y raghavendra) ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮತ್ತೋರ್ವ ಪುತ್ರ ಬಿ.ವೈ.ವಿಜಯೇಂದ್ರ (b y vijayendra) ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಮತ್ತೊಂದೆಡೆ, ಇವರ ಕುಟುಂಬದ ವಿರುದ್ದ ಮುನಿಸಿಕೊಂಡಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (k s eshwarappa) ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಈ ಎಲ್ಲ ಕಾರಣಗಳಿಂದ, ಬಿ.ವೈ.ರಾಘವೇಂದ್ರ ಗೆಲುವು ಬಿಎಸ್ವೈ ಕುಟುಂಬಕ್ಕೆ ಅತ್ಯಂತ ಮಹತ್ವದ್ದಾಗಿದೆ. ಬಿವೈಆರ್ ಗೆಲುವು ಹಲವರಿಗೆ ಏಕಕಾಲಕ್ಕೆ ಉತ್ತರ ನೀಡಿದಂತಾಗುತ್ತದೆ. ಒಂದು ವೇಳೆ ಪರಾಭವಗೊಂಡರೆ, ರಾಜಕೀಯವಾಗಿ ಬಿಎಸ್ವೈ ಕುಟುಂಬ ಸಾಕಷ್ಟು ಎಡರುತೊಡರು ಎದುರಿಸಬೇಕಾಗುತ್ತದೆ. ಸಂಕಷ್ಟಕ್ಕೆ ಸಿಲುಕಲಿದೆ. ಕೆ.ಎಸ್.ಈಶ್ವರಪ್ಪ ಕೈ ಮೇಲಾಗಲಿದೆ. ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಬಿ.ವೈ.ರಾಘವೇಂದ್ರಗೂ ಅಡ್ಡಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ : ಶಿಕ್ಷಣ ಸಚಿವ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (madhu bangarappa) ಅವರಿಗೂ ಶಿವಮೊಗ್ಗ ಕ್ಷೇತ್ರದ ಫಲಿತಾಂಶ ಮಹತ್ವದ್ದಾಗಿದೆ. ಅವರ ಸಹೋದರಿ ಗೀತಾ ಶಿವರಾಜಕುಮಾರ್ (geetha shivarajkumar) ಅವರಿಗೆ, ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.
ಸಹೋದರಿ ಜಯ ಸಾಧಿಸಿದರೆ ಪಕ್ಷದಲ್ಲಿನ ಅವರ ವರ್ಚಸ್ಸು, ಶಿವಮೊಗ್ಗ ಕಾಂಗ್ರೆಸ್ ಪಾಳೇಯದಲ್ಲಿನ ಅವರ ಹಿಡಿತ ಮತ್ತಷ್ಟು ಬಿಗಿಯಾಗಲಿದೆ. ಹಾಗೆಯೇ ಸಚಿವ ಸ್ಥಾನವೂ ಮುಂದುವರಿಯಲಿದೆ. ಒಂದು ವೇಳೆ ಪರಾಭವಗೊಂಡರೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆಯಿದೆ. ಹಾಗೆಯೇ ಜಿಲ್ಲೆಯ ಕಾಂಗ್ರೆಸ್ ಪಾಳೇಯದಲ್ಲಿನ ಅವರ ಹಿಡಿತದ ಮೇಲೆಯೂ ಪರಿಣಾಮ ಬೀರುವ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿದೆ.
ಇನ್ನೊಂದೆಡೆ, ನಟ ಶಿವರಾಜಕುಮಾರ್ (actor shivarajakumar) ಅವರಿಗೂ ಪತ್ನಿ ಗೀತಾ ಶಿವರಾಜಕುಮಾರ್ ಗೆಲುವು ಪ್ರತಿಷ್ಠೆಯಾಗಿದೆ. 2014 ರ ಚುನಾವಣೆಯಲ್ಲಿ ಗೀತಾ ಅವರು ಪರಾಭವಗೊಂಡಿದ್ದರು. ಇದೀಗ ಸರಿಸುಮಾರು 10 ವರ್ಷಗಳ ನಂತರ, ಮತ್ತೆ ಚುನಾವಣಾ ಕಣಕ್ಕಿಳಿದಿದ್ದಾರೆ. ಶಿವರಾಜಕುಮಾರ್ ಅವರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದರು.
ಬಂಡಾಯ : ಯಡಿಯೂರಪ್ಪ ಕುಟುಂಬದ ವಿರುದ್ದ ಸಮರ ಸಾರಿರುವ ಕೆ.ಎಸ್.ಈಶ್ವರಪ್ಪ ಅವರಿಗೆ ಈ ಚುನಾವಣೆ ನಿರ್ಣಾಯಕವಾಗಿದೆ. ಚುನಾವಣೆಯಲ್ಲಿ ಸೋತರೆ ರಾಜಕೀಯವಾಗಿ ಸಾಕಷ್ಟು ಹಿನ್ನಡೆ ಎದುರಿಸಬೇಕಾಗುತ್ತದೆ. ಒಂದು ವೇಳೆ ಅವರು ಜಯ ಸಾಧಿಸಿದರೆ ಬಿಜೆಪಿಯಲ್ಲಿ ಹೊಸ ಪರಿವರ್ತನೆಗೆ ನಾಂದಿಯಾಡಲಿದ್ದಾರೆ. ಹಾಗೆಯೇ ಬಿಜೆಪಿ ಸೋತು, ಕಾಂಗ್ರೆಸ್ ಜಯ ಸಾಧಿಸಿದರೂ ಕೆಎಸ್ಇ ಗೆ ರಾಜಕೀಯವಾಗಿ ಸಾಕಷ್ಟು ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಟ್ಟಾರೆ ಶಿವಮೊಗ್ಗ ಕ್ಷೇತ್ರದ ಲೋಕಸಭೆ ಚುನಾವಣಾ ಫಲಿತಾಂಶವು, ಜಿಲ್ಲೆಯ ಬಿಜೆಪಿ ಹಾಗೂ ಕಾಂಗ್ರೆಸ್ ಪಾಳೇಯದ ಹಲವು ನಾಯಕರುಗಳ ರಾಜಕೀಯ ಏರಿಳಿತಕ್ಕೆ ಕಾರಣವಾಗಲಿರುವುದಂತೂ ಸತ್ಯವಾಗಿದೆ.