
ಶಿವಮೊಗ್ಗ ಲೋಕಸಭಾ ಕ್ಷೇತ್ರ : ಗೆಲ್ಲೋದು ಯಾರು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜೂನ್ 2: ಲೋಕಸಭೆ ಚುನಾವಣೆ – 2024 ರ ಫಲಿತಾಂಶ (loksabha election result) ಜೂನ್ 4 ರಂದು ಪ್ರಕಟವಾಗಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿದೆ. ಗೆಲ್ಲೋದು ಯಾರು? ಎಂಬ ಚರ್ಚೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ ಬಿರುಸುಗೊಂಡಿದೆ.
ಈ ನಡುವೆ ವಿವಿಧ ಮಾಧ್ಯಮ ಸಂಸ್ಥೆಗಳು ಹಾಗೂ ಖಾಸಗಿ ಏಜೆನ್ಸಿಗಳ ಮತಗಟ್ಟೆ ಸಮೀಕ್ಷೆಗಳು (exit poll) ಪ್ರಕಟಗೊಂಡಿವೆ. ಶಿವಮೊಗ್ಗ ಕ್ಷೇತ್ರಕ್ಕೆ (shimoga lok sabha constituency) ಸಂಬಂಧಿಸಿದಂತೆ, ಬಿಜೆಪಿ ಪಕ್ಷ ಮುನ್ನಡೆ ಸಾಧಿಸುವ ಅಭಿಪ್ರಾಯಗಳು ವ್ಯಕ್ತವಾಗಿವೆ.
‘ಶಿವಮೊಗ್ಗ ಕ್ಷೇತ್ರದಲ್ಲಿ ಮತದಾನ ಪೂರ್ವದ ಚಿತ್ರಣ ಗಮನಿಸಿದಾಗ ಬಿಜೆಪಿ (bjp) ಅಭ್ಯರ್ಥಿ ಬಿ.ವೈ.ರಾಘವೇಂದ್ರ (b y raghavendra), ಕಾಂಗ್ರೆಸ್ (congress) ಅಭ್ಯರ್ಥಿ ಗೀತಾ ಶಿವರಾಜಕುಮಾರ್ (geetha shivarajkumar) ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ (k s eshwarappa) ಅವರ ನಡುವೆ ತ್ರಿಕೋನ ಹಣಾಹಣಿ ಏರ್ಪಡುವ ಚಿತ್ರಣವಿತ್ತು. ಆದರೆ ಮತದಾನೋತ್ತರದ ನಂತರ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹೋರಾಟದ ಚಿತ್ರಣ ಕಂಡುಬಂದಿತ್ತು. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಕೆ.ಎಸ್.ಈಶ್ವರಪ್ಪ ಅವರು ಮತಗಳಿಕೆಯಲ್ಲಿ ಸಾಕಷ್ಟು ಹಿನ್ನಡೆ ಸಾಧಿಸುವ ಸಾಧ್ಯತೆಗಳಿವೆ.
ಬಿಜೆಪಿಯಲ್ಲಿನ ಅಂತರ್ ಕಲಹದ ಲಾಭದ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದಾಗಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು, ಸಾಂಪ್ರದಾಯಿಕ ಮತಗಳ ಜೊತೆಗೆ ಈಶ್ವರಪ್ಪ ಬಂಡಾಯ ಸ್ಪರ್ಧೆ ಪಕ್ಷಕ್ಕೆ ನೆರವಾಗುವ ನಿರೀಕ್ಷೆ ಆ ಪಕ್ಷದಲ್ಲಿತ್ತು. ಆದರೆ ಈಶ್ವರಪ್ಪ ಫ್ಯಾಕ್ಟರ್ ‘ಕೈ’ ಹಿಡಿಯುವ ಸಾಧ್ಯತೆಯಿಲ್ಲವಾಗಿದೆ’ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಬೆಟ್ಟಿಂಗ್ : ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ, ವಿಜಯದ ನಗೆ ಬೀರುವವರು ಯಾರು? ಯಾವ್ಯಾವ ಅಸೆಂಬ್ಲಿ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗಳಿಗೆ ಮತಗಳಿಕೆಯಲ್ಲಿ ಮುನ್ನಡೆ – ಹಿನ್ನಡೆಯಾಗಲಿದೆ? ಎಂಬ ಲೆಕ್ಕಾಚಾರಗಳು ರಾಜಕೀಯ ವಲದಯಲ್ಲಿ ನಡೆಯಲಾರಂಭಿಸಿವೆ. ಈ ನಡುವೆ ಕೆಲ ರಾಜಕೀಯ ಕುತೂಹಲಿಗಳು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಸೋಲು – ಗೆಲುವಿನ ಮೇಲೆ ಬೆಟ್ಟಿಂಗ್ (betting) ಕೂಡ ಕಟ್ಟುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ.
ಕುಟುಂಬಗಳ ಮುಖಾಮುಖಿ : 2009 ರಿಂದ 2024 ರ ನಡುವೆ ಶಿವಮೊಗ್ಗ ಕ್ಷೇತ್ರದಲ್ಲಿ ನಡೆದ ನಾಲ್ಕು ಲೋಕಸಭೆ ಚುನಾವಣೆಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ (b s yediyurappa) ಹಾಗೂ ದಿವಂಗತ ಎಸ್.ಬಂಗಾರಪ್ಪ (s bangarappa) ಕುಟುಂಬಗಳು ಮುಖಾಮುಖಿಯಾಗುತ್ತಿರುವುದು ವಿಶೇಷವಾಗಿದೆ. ಆದರೆ ಈ ಎಲ್ಲ ಚುನಾವಣೆಗಳಲ್ಲಿಯೂ ಬಿ.ಎಸ್.ಯಡಿಯೂರಪ್ಪ ಕುಟುಂಬ ಜಯ ಸಾಧಿಸಿದೆ.
2009 ರಲ್ಲಿ ಎಸ್.ಬಂಗಾರಪ್ಪ ಹಾಗೂ ಬಿ.ವೈ.ರಾಘವೇಂದ್ರ ಎದುರಾಳಿಯಾಗಿದ್ದರು. 2014 ರ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್ ಮುಖಾಮುಖಿಯಾಗಿದ್ದರು. 2017 ರಲ್ಲಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಹಾಗೂ ಮಧು ಬಂಗಾರಪ್ಪ (madhu bangarappa) ಎದುರಾಳಿಗಳಾಗಿದ್ದರು. ನಂತರ 2018 ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮತ್ತೆ ಇವರಿಬ್ಬರು ಮುಖಾಮುಖಿಯಾಗಿದ್ದರು.
ಗೆಲುವು ಯಾರದ್ದೂ?: ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರುಗಳು, ಗೆಲುವು ನಮ್ಮ ಪಕ್ಷದ ಅಭ್ಯರ್ಥಿಯದ್ದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಶಿವಮೊಗ್ಗ ಕ್ಷೇತ್ರದಲ್ಲಿ ಈ ಬಾರಿ ವಿಜಯದ ಪತಾಕೆ ಹಾರಿಸುವುದು ಯಾರೆಂಬುವುದು ಜೂನ್ 4 ರಂದು ಸ್ಪಷ್ಟವಾಗಲಿದೆ.