
ಶಿವಮೊಗ್ಗದಲ್ಲಿ ಬಿಜೆಪಿಗೆ ಜಯಭೇರಿ : ಕಾಂಗ್ರೆಸ್’ಗೆ ಮುಖಭಂಗ – ಈಶ್ವರಪ್ಪಗೆ ಹೀನಾಯ ಸೋಲು!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜೂ. 4: ಹೈವೋಲ್ಟೇಜ್ ಹಣಾಹಣಿಗೆ ಸಾಕ್ಷಿಯಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ (shimoga lok sabha constituency) ಫಲಿತಾಂಶ ಹೊರಬಂದಿದೆ. ಮತ್ತೇ ಬಿಜೆಪಿ ಭರ್ಜರಿ ಜಯಭೇರಿ ಸಾಧಿಸಿದೆ. ಕಾಂಗ್ರೆಸ್ ಪಕ್ಷ ತೀವ್ರ ಮುಖಭಂಗಕ್ಕೀಡಾಗಿದೆ. ಬಿಜೆಪಿ ಅಭ್ಯರ್ಥಿ ಸೋಲಿಸಲೆಂದೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಠೇವಣಿ ಕಳೆದುಕೊಂಡಿದ್ದಾರೆ. ಹೀನಾಯ ಸೋಲನುಭವಿಸಿದ್ದಾರೆ.
ವಿಜೇತ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ (bjp b y raghavendra) ಅವರು 7,78,721 ಮತ ಪಡೆದಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ಗೀತಾ ಶಿವರಾಜಕುಮಾರ್ ಅವರು 5,35,006 ಮತ ಗಳಿಸಿದ್ದಾರೆ. ಆದರೆ ಮಾಜಿ ಡಿಸಿಎಂ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಕೇವಲ 30,050 ಮತ ಗಳಿಸಲಷ್ಟೆ ಶಕ್ತರಾಗಿದ್ದಾರೆ.
ಮತಗಳಿಕೆಯಲ್ಲಿ ಬಿ.ವೈ.ರಾಘವೇಂದ್ರ ಹಾಗೂ ಗೀತಾ ಶಿವರಾಜಕುಮಾರ್ (congress geetha shivarajakumar) ಅವರ ನಡುವೆ ಭಾರೀ ಪೈಪೋಟಿ ಕಂಡುಬಂದಿತ್ತು. ಆದರೆ ಪ್ರತಿಯೊಂದು ಸುತ್ತಿನಲ್ಲಿಯೂ ಬಿ.ವೈ.ರಾಘವೇಂದ್ರ ಮುನ್ನಡೆ ಕಾಯ್ದುಕೊಂಡು ಬಂದರು. ಅಂತಿಮವಾಗಿ 2,43,715 ಮತಗಳ ಭಾರೀ ಅಂತರದಿಂದ ವಿಜಯದ ನಗೆ ಬೀರುವಲ್ಲಿ ಸಫಲರಾಗಿದ್ದಾರೆ.
ಎಲ್ಲೆಡೆ ಮುನ್ನಡೆ : ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿ.ವೈ.ರಾಘವೇಂದ್ರ ಮತಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಶಾಸಕರಿರುವ ಸೊರಬ, ಸಾಗರ, ಭದ್ರಾವತಿ ಕ್ಷೇತ್ರಗಳಲ್ಲಿಯೂ ಅವರು ಮತಗಳಿಕೆಯಲ್ಲಿ ಲೀಡ್ ಸಂಪಾದಿಸಿರುವುದು ವಿಶೇಷವಾಗಿದೆ.
ಜಯಭೇರಿ : ಶಿವಮೊಗ್ಗ ಕ್ಷೇತ್ರದ ಕ್ಷೇತ್ರದ ಚುನಾವಣೆ ಫಲಿತಾಂಶವು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಅದರಲ್ಲಿಯೂ ನಾನಾ ರಾಜಕೀಯ ಕಾರಣಗಳಿಂದ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಗೆಲುವು ಅನಿವಾರ್ಯವಾಗಿತ್ತು. ಕೊನೆಗೂ ಬಿಜೆಪಿ ಪಕ್ಷ ಜಯಭೇರಿ ಭಾರಿಸುವಲ್ಲಿ ಸಫಲವಾಗಿದೆ. ಕ್ಷೇತ್ರದ ಮೇಲಿನ ತನ್ನ ಹಿಡಿತ ಮುಂದುವರಿಸಿದೆ.
ಬಿ.ವೈ.ರಾಘವೇಂದ್ರ ಅವರಿಗೆ ಇದು ಸತತ ಮೂರನೇ ಗೆಲುವಾಗಿದ್ದು, ಒಟ್ಟಾರೆ ಇದುವರೆಗೂ ಅವರು ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾದಂತಾಗಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ, ಬಿವೈಆರ್ ಗೆ ಮಂತ್ರಿಯಾಗುವ ಅವಕಾಶ ಲಭ್ಯವಾಗುವ ಸಾಧ್ಯತೆಯಿದೆ ಎಂದು ಬಿಜೆಪಿ ಪಾಳೇಯದಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ.
ಮುಖಭಂಗ : ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್, ಅವರ ಪತಿ ನಟ ಶಿವರಾಜಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಪ್ರಸ್ತುತ ಚುನಾವಣೆ ಅತ್ಯಂತ ಮಹತ್ವದ್ದಾಗಿತ್ತು. ಚುನಾವಣೆ ವೇಳೆ ಈ ಮೂವರು, ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಕ್ಷೇತ್ರ ಸುತ್ತು ಹಾಕಿದ್ದರು. ಆದರೆ ಗೀತಾ ಪರಾಭವಗೊಂಡಿರುವುದು, ರಾಜಕೀಯವಾಗಿ ಸಾಕಷ್ಟು ಹಿನ್ನಡೆಯಾಗುವಂತಾಗಿದೆ.
ಗೀತಾ ಶಿವರಾಜಕುಮಾರ್ ಅವರ ಚುನಾವಣಾ ರಾಜಕಾರಣಕ್ಕೆ ತೆರೆ ಬೀಳಬಹುದು. ಮುಂದಿನ ದಿನಗಳಲ್ಲಿ ಮಧು ಬಂಗಾರಪ್ಪ ಅವರ ಸಚಿವ ಸ್ಥಾನಕ್ಕೂ ಸಂಕಷ್ಟ ಎದುರಾಗುವ ಸಾಧ್ಯಾಸಾಧ್ಯತೆಗಳು ಅಲ್ಲಗಳೆಯುವಂತಿಲ್ಲ. ಹಾಗೆಯೇ ಜಿಲ್ಲಾ ಕಾಂಗ್ರೆಸ್ ಪಾಳೇಯದಲ್ಲಿನ ಅವರ ಬಿಗಿ ಹಿಡಿತ ಕೈತಪ್ಪಬಹುದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಸಂಕಷ್ಟ : ಬಿ.ಎಸ್.ಯಡಿಯೂರಪ್ಪ ವಿರುದ್ದ ಮುನಿಸಿಕೊಂಡು ಅವರ ಪುತ್ರ ಬಿ.ವೈ.ರಾಘವೇಂದ್ರ ಮಣಿಸುವ ಏಕೈಕ ಉದ್ದೇಶದಿಂದ ಕಣಕ್ಕಿಳಿದಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪರಿಗೆ, ಸದರಿ ಚುನಾವಣೆ ಫಲಿತಾಂಶ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ನಿರೀಕ್ಷಿತ ಮತ ಗಳಿಸಲಾಗದೆ, ಅತ್ಯಂತ ಹೀನಾಯವಾಗಿ ಪರಾಭವಗೊಳ್ಳುವಂತಾಗಿದೆ. ಜೊತೆಗೆ ಠೇವಣಿಯೂ ಕಳೆದುಕೊಳ್ಳುವಂತಾಗಿದೆ.
ಕೆ.ಎಸ್.ಈಶ್ವರಪ್ಪರ (k s eshwarappa) ಹಿಂದುತ್ವದ ಲೆಕ್ಕಾಚಾರ ಕ್ಷೇತ್ರದಲ್ಲಿ ಫಲ ನೀಡಿಲ್ಲವಾಗಿದೆ. ಅವರ ಸ್ವಕ್ಷೇತ್ರ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿಯೂ ಅವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮತ ಬಂದಿಲ್ಲ. ಅವರೇ ತೋಡಿದ್ದ ಖೆಡ್ಡಾಕ್ಕೆ ಅವರೇ ಬೀಳುವಂತಾಗಿದೆ. ಮುಂದಿನ ದಿನಗಳಲ್ಲಿ ಅವರು ಮತ್ತೆ ಬಿಜೆಪಿ ಮರು ಸೇರ್ಪಡೆಯಾಗುವುದಕ್ಕೂ ಇದು ಸಂಕಷ್ಟಕರವಾಗಿ ಪರಿಣಮಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಒಟ್ಟಾರೆ ಶಿವಮೊಗ್ಗ ಕ್ಷೇತ್ರದ ಫಲಿತಾಂಶ ಮುಂದಿನ ದಿನಗಳಲ್ಲಿ ಜಿಲ್ಲಾ ರಾಜಕಾರಣದಲ್ಲಿ ಭಾರೀ ಬದಲಾವಣೆಗೆ ವೇದಿಕೆಯಾಗುವುದು ನಿಶ್ಚಿತವೆಂದರೇ ತಪ್ಪಾಗಲಾರದು.