
ಶಿವಮೊಗ್ಗ, ಮೈಸೂರು, ತುಮಕೂರು ಮಹಾನಗರ ಪಾಲಿಕೆಗಳ ಚುನಾವಣೆ ಯಾವಾಗ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜೂ. 7: ಅಧಿಕಾರಾವಧಿ ಪೂರ್ಣಗೊಂಡು ಏಳೆಂಟು ತಿಂಗಳಾಗುತ್ತ ಬಂದರೂ ಶಿವಮೊಗ್ಗ (shimoga), ಮೈಸೂರು (mysuru) ಹಾಗೂ ತುಮಕೂರು (tumakuru) ಮಹಾನಗರ ಪಾಲಿಕೆಗಳ (municipal corporation) ವಾರ್ಡ್ ಚುನಾವಣೆ ಪ್ರಕ್ರಿಯೆ ಆರಂಭವಾಗಿಲ್ಲ. ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಸದ್ಯಕ್ಕೆ ಚುನಾವಣೆ ನಡೆಯುವ ಯಾವುದೇ ಲಕ್ಷಣಗಳು ಗೋಚರವಾಗುತ್ತಿಲ್ಲವಾಗಿದೆ!
ಈ ಮೂರು ಪಾಲಿಕೆಗಳಿಗೆ 2018 ರ ಆಗಸ್ಟ್ 31 ರಂದು ಚುನಾವಣೆ ನಡೆದಿತ್ತು. ಸೆಪ್ಟೆಂಬರ್ 3 ರಂದು ಮತಗಳ ಎಣಿಕೆಯಾಗಿತ್ತು. ನವೆಂಬರ್ ತಿಂಗಳಲ್ಲಿ ಮೇಯರ್ – ಉಪ ಮೇಯರ್ ಗಳ ಆಯ್ಕೆಯಾಗಿತ್ತು. ಮೊದಲ ಸಾಮಾನ್ಯ ಸಭೆಯಿಂದ ಹಾಲಿ ಸದಸ್ಯರ ಅಧಿಕಾರಾವಧಿ ಆರಂಭಗೊಂಡಿತ್ತು.
ಈ ಹಿಂದಿನ ಕಾರ್ಪೋರೇಟರ್ ಗಳ (corporators) ಅಧಿಕಾರಾವಧಿ 2023 ರ ನವೆಂಬರ್ ತಿಂಗಳಲ್ಲಿ ಅಂತ್ಯಗೊಂಡಿತ್ತು. ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಕಳೆದ ಡಿಸೆಂಬರ್ – ಜನವರಿ ತಿಂಗಳಲ್ಲಿ ಚುನಾವಣೆ ನಡೆಯಬೇಕಾಗಿತ್ತು. ಆದರೆ ಲೋಕಸಭೆ ಸಾರ್ವತ್ರಿಕ ಚುನಾವಣೆ (loksabha election) ಕಾರಣದಿಂದ, ರಾಜ್ಯ ಸರ್ಕಾರ ಮೂರು ಪಾಲಿಕೆಗಳಿಗೆ ಚುನಾವಣೆ ನಡೆಸುವ ಗೋಜಿಗೆ ಮುಂದಾಗಿರಲಿಲ್ಲ. ಆಡಳಿತಾಧಿಕಾರಿಗಳ ನಿಯೋಜನೆ ಮಾಡಲಾಗಿತ್ತು.
ಸದ್ಯ ಲೋಕಸಭೆ ಚುನಾವಣೆ ಪೂರ್ಣಗೊಂಡಿದೆ. ಆದರೆ ರಾಜ್ಯ ಸರ್ಕಾರದ (state govt) ಹಂತದಲ್ಲಿ ಚುನಾವಣಾ ಪೂರ್ವಭಾವಿ ಸಿದ್ದತೆಗಳು ಆರಂಭವಾಗಿಲ್ಲ. ಇದರಿಂದ ಈ ಮೂರು ಪಾಲಿಕೆಗಳಿಗೆ ಚುನಾವಣೆ ಮತ್ತಷ್ಟು ತಿಂಗಳುಗಳ ಕಾಲ ವಿಳಂಬವಾಗಲಿದೆಯೇ? ಎಂಬ ಅನುಮಾನಗಳು ಮೂಡುವಂತಾಗಿದೆ.
ಈಗಾಗಲೇ ನಾನಾ ಆಡಳಿತಾತ್ಮಕ ಮತ್ತೀತರ ಕಾರಣದಿಂದ ಜಿಲ್ಲಾ ಪಂಚಾಯ್ತಿ (zp) ಹಾಗೂ ತಾಲೂಕು ಪಂಚಾಯ್ತಿಗಳಿಗೆ (tp) ಇಲ್ಲಿಯವರೆಗೂ ಚುನಾವಣೆ ನಡೆದಿಲ್ಲ. ಇದೇ ರೀತಿಯಲ್ಲಿ ಅಧಿಕಾರಾವಧಿ ಪೂರೈಸಿರುವ ಮೂರು ಪಾಲಿಕೆಗಳ ಸ್ಥಿತಿಯೂ ಆಗಲಿದೆಯೇ? ಎಂಬ ಚರ್ಚೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ ನಡೆಯುತ್ತಿವೆ.
ಬೃಹತ್ ಬೆಂಗಳೂರು (bengaluru) ಮಹಾನಗರ ಪಾಲಿಕೆ (bbmp) ಚುನಾವಣೆ ನಡೆಸಲು ಸರ್ಕಾರ ಸಿದ್ದವಿರುವುದಾಗಿ ಈಗಾಗಲೇ ಸಿಎಂ – ಡಿಸಿಎಂ (cm – dcm) ಹೇಳಿದ್ದಾರೆ. ಈ ವೇಳೆ ಶಿವಮೊಗ್ಗ, ತುಮಕೂರು, ಮೈಸೂರು ಮಹಾನಗರ ಪಾಲಿಕೆಗಳ ಚುನಾವಣೆ ನಡೆಸಲು ಸರ್ಕಾರ ಮುಂದಾಗುವ ಸಾಧ್ಯತೆಗಳಿದೆ ಎನ್ನಲಾಗುತ್ತಿದೆ.
ಮತ್ತೊಂದೆಡೆ, ಕೆಲ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ವಾರ್ಡ್ ಚುನಾವಣೆ ನಡೆಸಲು ಸರ್ಕಾರದ ಮೇಲೆ ಒತ್ತಡ ಹಾಕಲಾರಂಭಿಸಿದ್ದಾರೆ ಎಂಬ ಮಾಹಿತಿಗಳು ರಾಜಕೀಯ ವಲಯದಿಂದ ಕೇಳಿಬರಲಾರಂಭಿಸಿದೆ. ಒಟ್ಟಾರೆ ಬಿಬಿಎಂಪಿ, ಶಿವಮೊಗ್ಗ, ತುಮಕೂರು ಹಾಗೂ ಮೈಸೂರು ಪಾಲಿಕೆಗಳ ಚುನಾವಣೆ ಯಾವಾಗ ಎಂಬುವುದು ಯಕ್ಷಪ್ರಶ್ನೆಯಾಗಿದೆ.