
ಮೋದಿ ಸರ್ಕಾರ : ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರಗೆ ಸಚಿವ ಸ್ಥಾನ ಅನುಮಾನ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜೂ. 8: ನರೇಂದ್ರ ಮೋದಿ (narendra modi) ನೇತೃತ್ವದ ಸಚಿವ ಸಂಪುಟದಲ್ಲಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಸ್ಥಾನ ದೊರಕುವುದೆ? ಇಲ್ಲವೇ? ಎಂಬ ಚರ್ಚೆಗಳು ಸ್ಥಳೀಯ ಬಿಜೆಪಿ ಪಾಳೇಯದಲ್ಲಿ ಬಿರುಸುಗೊಂಡಿವೆ.
ಪ್ರಸ್ತುತ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ (b y raghavendra) ಅವರು ಭಾರೀ ಮತಗಳ ಅಂತರದಲ್ಲಿ ಜಯ ಸಂಪಾದಿಸಿದ್ದಾರೆ. ಈ ಬಾರಿ ಬಿ.ವೈ.ಆರ್ ಆಯ್ಕೆಯಾದರೆ, ಮೋದಿ ಸರ್ಕಾರದಲ್ಲಿ ಸಚಿವರಾಗುವುದು ನಿಶ್ಚಿತ ಎಂದು ಸ್ಥಳೀಯ ಬಿಜೆಪಿ ನಾಯಕರು ಚುನಾವಣೆ ಪೂರ್ವದ ಸಭೆ – ಸಮಾರಂಭಗಳಲ್ಲಿ ಹೇಳುತ್ತಿದ್ದರು. ಇದೇ ವಿಶ್ವಾಸದಲ್ಲಿ ಬಿ.ವೈ.ಆರ್ ಕೂಡ ಇದ್ದರು.
‘2009 ರಿಂದ 2024 ರ ಅವಧಿಯಲ್ಲಿ ಬಿ.ವೈ.ಆರ್ (byr) ಅವರು ನಾಲ್ಕು ಬಾರಿ ಸಂಸತ್ (parliment) ಪ್ರವೇಶಿಸಿದ್ದಾರೆ. ಒಮ್ಮೆಯೂ ಪರಾಭವಗೊಂಡಿಲ್ಲ. ಪ್ರಸ್ತುತ ರಾಜ್ಯದಿಂದ ಸಂಸತ್ ಗೆ ಆಯ್ಕೆಯಾಗಿರುವ 17 ಬಿಜೆಪಿ ಸದಸ್ಯರಲ್ಲಿ ಅತೀ ಹೆಚ್ಚು ಬಾರಿ ಸಂಸತ್ ಪ್ರವೇಶಿಸಿದವರ ಪಟ್ಟಿಯಲ್ಲಿ, ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ್ ( 5 ಬಾರಿ) ಪ್ರಥಮ ಸ್ಥಾನದಲ್ಲಿದ್ದಾರೆ. ಬಿ.ವೈ.ರಾಘವೇಂದ್ರ ಎರಡನೇ ಸ್ಥಾನದಲ್ಲಿದ್ದಾರೆ.
ಸಂಸದ ಸ್ಥಾನದ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ಆಯ್ಕೆ ನಡೆದರೆ, ಪಿ.ಸಿ.ಗದ್ದಿಗೌಡರ್ ಅಥವಾ ಬಿ.ವೈ.ರಾಘವೇಂದ್ರಗೆ ಮಂತ್ರಿ ಸ್ಥಾನದ ಯೋಗ ಲಭ್ಯವಾಗುವ ಸಾಧ್ಯತೆಯಿದೆ. ಆದರೆ ಮೊದಲ ಹಂತದ ಸಚಿವ ಸಂಪುಟ (cabinet) ವಿಸ್ತರಣೆಯಲ್ಲಿ ರಾಜ್ಯ ಬಿಜೆಪಿಯಿಂದ ಒಂದಿಬ್ಬರಿಗೆ ಮಾತ್ರ ಅವಕಾಶ ಲಭ್ಯವಾಗುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಬಿಜೆಪಿಯಿಂದ (bjp) ಇಬ್ಬರು ಮಾಜಿ ಸಿಎಂಗಳು (former cm) ಸೇರಿದಂತೆ ಈ ಹಿಂದೆ ಮೋದಿ ಸಂಪುಟದಲ್ಲಿ ಸಚಿವರಾಗಿದ್ದವರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಸಚಿವ ಸ್ಥಾನಕ್ಕೆ ಇವರನ್ನು ಪರಿಗಣಿಸಿದರೆ, ಬಿ.ವೈ.ಆರ್ ಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆಗಳು ಕ್ಷೀಣ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಆದ್ಯತೆ ಸಿಗಬಹುದು ಎಂದು ಹೇಳಲಾಗುತ್ತಿದೆ.
ಸಿಗದ ಅವಕಾಶ : ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಬಿ.ವೈ.ಆರ್ ಗೆ ಸಚಿವ ಸ್ಥಾನದ ಅವಕಾಶಗಳಿದ್ದವು. ಆದರೆ ಅವರ ತಂದೆ ಬಿ.ಎಸ್.ಯಡಿಯೂರಪ್ಪ (b s yediyurappa) ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ (chief minister) ನೇಮಕಗೊಂಡಿದ್ದ ಹಿನ್ನೆಲೆಯಲ್ಲಿ, ಸಚಿವ ಸ್ಥಾನ ಕೈತಪ್ಪುವಂತಾಗಿತ್ತು. ತದನಂತರ ಅವರಿಗೆ ಸಚಿವ ಸ್ಥಾನದ ಅವಕಾಶಗಳು ಲಭ್ಯವಾಗಿರಲಿಲ್ಲ.
ಈ ಬಾರಿ ಸಚಿವ ಸ್ಥಾನದ ಅವಕಾಶದ ನಿರೀಕ್ಷೆ ಅವರದ್ಧಾಗಿತ್ತು. ಆದರೆ ಬಿಜೆಪಿ ಪಕ್ಷಕ್ಕೆ ಪೂರ್ಣ ಬಹುಮತ ದೊರಕದಿರುವುದು ಹಾಗೂ ಎನ್.ಡಿ.ಎ (nda) ಮಿತ್ರ ಪಕ್ಷಗಳಿಗೆ ಹೆಚ್ಚಿನ ಆದ್ಯತೆ ಕಲ್ಪಿಸಬೇಕಾಗಿರುವುದರಿಂದ, ಬಿಜೆಪಿ ಸದಸ್ಯರಿಗೆ ಸಂಪುಟದಲ್ಲಿ ಹೆಚ್ಚಿನ ಅವಕಾಶ ಸಿಗುವುದು ವಿರಳವಾಗಿದೆ. ಈ ಕಾರಣದಿಂದ ಬಿ.ವೈ.ರಾಘವೇಂದ್ರ ಅವರಿಗೆ ಮೋದಿ 3.0 ಸರ್ಕಾರದಲ್ಲಿ ಸಚಿವರಾಗುವ ಯೋಗ ಲಭ್ಯವಾಗಲಿದೆಯಾ? ಇಲ್ಲವೇ? ಎಂಬುವುದು ಇನ್ನಷ್ಟೆ ಕಾದು ನೋಡಬೇಕಾಗಿದೆ.