
ಕೊಲೆ ಕೇಸ್ : ಚಿತ್ರನಟ ದರ್ಶನ್ ಪೊಲೀಸ್ ವಶಕ್ಕೆ!
ಮೈಸೂರು / ಬೆಂಗಳೂರು, ಜೂ. 11: ವ್ಯಕ್ತಿಯೋರ್ವರ ಕೊಲೆ ಪ್ರಕರಣದಲ್ಲಿ ಕನ್ನಡ ಚಲನಚಿತ್ರ ರಂಗದ ಪ್ರಸಿದ್ದ ನಟ ದರ್ಶನ್ (actor Darshan) ಸೇರಿದಂತೆ 10 ಜನರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಮೈಸೂರಿನ (mysuru) ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಅವರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದು ತಿಳಿದುಬಂದಿದೆ.
ನಟ ದರ್ಶನ್ ಗೆಳತಿ ಪವಿತ್ರಾ ಗೌಡರ ಮೊಬೈಲ್ ಪೋನ್ ಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರು ಅಶ್ಲೀಲ ಸಂದೇಶ ಕಳುಹಿಸಿದ್ದರು.ಈ ಕಾರಣಕ್ಕೆ ನಟ ದರ್ಶನ್ ಸೂಚನೆ ಮೇರೆಗೆ ಅವರ ಸಹಚರರು ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿಕೊಂಡಿದ್ದರು ಎನ್ನಲಾಗಿದೆ.
ಕಾಮಾಕ್ಷಿಪಾಳ್ಯದ ಶೆಡ್ ವೊಂದರಲ್ಲಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಮೋರಿಗೆ ಎಸೆದು ಹೋಗಿದ್ದರು ಎನ್ನಲಾಗಿದೆ. ಕಳೆದ ಭಾನುವಾರ ಮೋರಿಯಲ್ಲಿ ಶವ ಪತ್ತೆಯಾಗಿತ್ತು. ರೇಣುಕಾಸ್ವಾಮಿ ಪೋಷಕರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ನಟ ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಿದ್ದಾಗಿ ಕೆಲ ಆರೋಪಿಗಳು ಪೊಲೀಸರ ವಿಚಾರಣೆಯಲ್ಲಿ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದರ್ಶನ್ ಸೇರಿದಂತೆ 10 ಜನರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.