
ಕೊಲೆ ಪ್ರಕರಣ : ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಎಲ್ಲ ಆರೋಪಿಗಳು ಪೊಲೀಸ್ ಕಸ್ಟಡಿಗೆ!
ಬೆಂಗಳೂರು (bengaluru), ಜೂ. 11: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ (renuka swami murder case) ಸಂಬಂಧಿಸಿದಂತೆ ಬಂಧಿತರಾಗಿರುವ ಚಿತ್ರನಟ ದರ್ಶನ್ (actor darshan), ಪವಿತ್ರಗೌಡ (pavitra gowda) ಸೇರಿದಂತೆ ಎಲ್ಲ 13 ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ 6 ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಂಜೆ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ 14 ದಿನಗಳ ಕಾಲ ಆರೋಪಿಗಳನ್ನು ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಆದರೆ ನ್ಯಾಯಾಧೀಶರು 6 ದಿನಗಳ ಕಾಲ ಆರೋಪಿಗಳನ್ನು ಪೊಲೀಸರ ವಶಕ್ಕೊಪ್ಪಿಸಿ (police custody) ಆದೇಶಿಸಿದ್ದಾರೆ.
ಏನೀದು ಪ್ರಕರಣ? : ಪವಿತ್ರಗೌಡಗೆ ಸಾಮಾಜಿಕ ಜಾಲತಾಣದಲ್ಲಿ (social media) ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಆರೋಪದ ಮೇರೆಗೆ, ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ (chitradurga) ನಟ ದರ್ಶನ್ (darshan) ಸಹಚರರು ಕಿಡ್ನ್ಯಾಪ್ ಮಾಡಿ ಬೆಂಗಳೂರಿಗೆ ಕರೆತಂದಿದ್ದರು.
ಆರ್. ಆರ್. ನಗರದ ಪಟ್ಟಣಗೆರೆ ಶೆಡ್ ವೊಂದರಲ್ಲಿ ಕೂಡಿ ಹಾಕಿ ಮನಸೋಇಚ್ಚೆ ಹಲ್ಲೆ ನಡೆಸಿದ್ದು, ಇದರಿಂದ ರೇಣುಕಾ ಸ್ವಾಮಿ ಮೃತಪಟ್ಟಿದ್ದರು. ನಂತರ ಅವರ ಶವವನ್ನು ಮೋರಿಯೊಂದರಲ್ಲಿ ಎಸೆಯಲಾಗಿತ್ತು.
ಮೋರಿಯಲ್ಲಿ ಶವವಿರುವ ಕುರಿತಂತೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಈ ನಡುವೆ ಮೂವರು ಆರೋಪಿಗಳು ತಾವೇ ಕೊಲೆ ಮಾಡಿದ್ದಾಗಿ, ಪೊಲೀಸರಿಗೆ ಶರಣಾಗಿದ್ದರು ಎನ್ನಲಾಗಿದೆ.
ಪ್ರಕರಣದ ಕೂಲಂಕಷ ತನಿಖೆಗೆ ಮುಂದಾದ ಪೊಲೀಸರಿಗೆ ಬೇರೆಯದೆ ಆಯಾಮವಿರುವುದು ಬೆಳಕಿಗೆ ಬಂದಿತ್ತು. ರೇಣುಕಾ ಸ್ವಾಮಿಯನ್ನು ಶೆಡ್ ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದ ವೇಳೆ ಸ್ಥಳದಲ್ಲಿ ನಟ ದರ್ಶನ್, ಪವಿತ್ರಗೌಡ ಅವರು ಕೂಡ ಇದ್ದ ವಿಷಯವನ್ನು ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಇದರ ಆಧಾರದ ಮೇಲೆ ಪೊಲೀಸರು ಮಂಗಳವಾರ ಬೆಳಿಗ್ಗೆ ಮೈಸೂರಿನಲ್ಲಿದ್ದ (mysuru) ನಟ ದರ್ಶನ್ ಸೇರಿದಂತೆ ಪ್ರಕರಣದ ಇತರೆ ಆರೋಪಿಗಳನ್ನು ಬಂಧಿಸಿದ್ದಾರೆ.