👉 ಬೇಡಿಕೆ ಈಡೇರದಿದ್ದರೆ ಮಾರ್ಚ್ 1 ರಿಂದ ರಾಜ್ಯಾದ್ಯಂತ ಸರ್ಕಾರಿ ನೌಕರರ ಮುಷ್ಕರ ನಿಶ್ಚಿತ 👉 ಮುಖ್ಯಮಂತ್ರಿಗೆ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಖಡಕ್ ಎಚ್ಚರಿಕೆ!

ಶಿವಮೊಗ್ಗ, ಫೆ. 25: ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳದಿದ್ದರೆ, ಮಾರ್ಚ್ 1 ರಿಂದ ನಡೆಸಲು ಉದ್ದೇಶಿಸಿರುವ ನೌಕರರ ಅನಿರ್ದಿಷ್ಟಾವಧಿ ಮುಷ್ಕರವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಆರೋಗ್ಯ, ಶಿಕ್ಷಣ, ಕಂದಾಯ ಸೇರಿದಂತೆ ಎಲ್ಲ ಇಲಾಖೆಗಳ ಲಕ್ಷಾಂತರ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಮಂಡಿಸಲಾದ ಬಜೆಟ್ ನಲ್ಲಿ ನೌಕರರ ಬೇಡಿಕೆ ಈಡೇರುವ ನಿರೀಕ್ಷೆಯಿತ್ತು. ಆದರೆ ಬಜೆಟ್ ನಲ್ಲಿ ನೌಕರರ ಪ್ರಮುಖ ಬೇಡಿಕೆಗಳು ಈಡೇರಿಕೆಯಾಗಿಲ್ಲ. ನಿರ್ಲಕ್ಷ್ಯ ಧೋರಣೆ ತಳೆದಿರುವುದು ಬೇಸರ ಮೂಡಿಸಿದೆ. ಮುಖ್ಯಮಂತ್ರಿಗಳ ಧೋರಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಆದಾಯ ಸಂಗ್ರಹಿಸಿಕೊಡುವ ನಿಟ್ಟಿನಲ್ಲಿ ನೌಕರರು ಹೆಚ್ಚುವರಿಯಾಗಿ ಕೆಲಸ ಮಾಡಲು ಸಿದ್ದರಾಗಿದ್ದಾರೆ. ಹಲವು ಇಲಾಖೆಗಳು ಸರ್ಕಾರ ನಿಗದಿಗೊಳಿಸಿದ್ದ ಗುರಿಯನ್ನು ಅವಧಿಗೂ ಮುನ್ನವೇ ಮಾಡಿವೆ. ನೌಕರರನ್ನು ಸರಿಯಾಗಿ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ನೌಕರರ ಬೇಡಿಕೆ ಈಡೇರಿಕೆಗೆ ಸರ್ಕಾರ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕು. ಈಗಾಗಲೇ ಸಂಘದಿಂದ ಮುಷ್ಕರ ನಡೆಸುವ ಕುರಿತಂತೆ ಸರ್ಕಾರಕ್ಕೆ ಫೆ. 22 ರಂದು 7 ದಿನಗಳ ನೋಟೀಸ್ ನೀಡಲಾಗಿದೆ.  ನಿಗದಿತ ಅವಧಿಯೊಳಗೆ ಬೇಡಿಕೆ ಈಡೇರದಿದ್ದರೆ ಮುಷ್ಕರ ಆರಂಭಿಸುವುದು ನಿಶ್ಚಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳು ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು. ಈ ಮೂಲಕ ಸರ್ಕಾರಿ ನೌಕರರ ಹಿತಾಸಕ್ತಿ ರಕ್ಷಣೆ ಮಾಡಬೇಕು. ಈಗಾಗಲೇ ಸರ್ಕಾರಿ ನೌಕರರ ಬೇಡಿಕೆ ಈಡೇರಿಸುವಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಹೇಳಿದ್ದಾರೆ. ನ್ಯಾಯಯುತ ಬೇಡಿಕೆ ಈಡೇರಿಕೆಗೆ ಸರ್ಕಾರ ಕ್ರಮಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಗೋಷ್ಠಿಯಲ್ಲಿ ನೌಕರರ ಸಂಘದ ಪ್ರಮುಖರಾದ ಮೋಹನ್ ಕುಮಾರ್, ಕೃಷ್ಣಮೂರ್ತಿ, ಅರುಣ್ ಕುಮಾರ್, ಮಾರುತಿ, ಪಾಪಣ್ಣ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ನೌಕರರ ಪ್ರಮುಖ ಬೇಡಿಕೆಗಳೇನು?
ರಾಜ್ಯ ಸರ್ಕಾರಿ ನೌಕರರ ವೇತನ, ತುಟ್ಟಿ ಭತ್ಯೆ, ಸೌಲಭ್ಯಗಳ ಪರಿಷ್ಕರಣೆಗಾಗಿ ನೇಮಿಸಲಾಗಿರುವ 7 ನೇ ವೇತನ ಆಯೋಗದ ಶಿಫಾರಸ್ಸುಗಳ ಮಧ್ಯಂತರ ವರದಿ ಪಡೆದು ಶೇ.40 ರಷ್ಟು ಫಿಟ್ಮೆಂಟ್ ಅನ್ನು ಜುಲೈ 1 ರಿಂದ ಜಾರಿಗೊಳಿಸಬೇಕು.
ಈಗಾಗಲೇ ಹಲವು ರಾಜ್ಯಗಳಲ್ಲಿ ಎನ್.ಪಿ.ಎಸ್. ವ್ಯವಸ್ಥೆ ರದ್ದುಗೊಳಿಸಲಾಗಿದೆ. ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಎನ್.ಪಿ.ಎಸ್ ರದ್ದುಗೊಳಿಸಿ, ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂಬುವುದು ಸಂಘದ ಪ್ರಮುಖ ಬೇಡಿಕೆಯಾಗಿದೆ.

Previous post ಫೆ.26, 27 ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ!
Next post ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ : ಸಕಲ ಸಿದ್ಧತೆ!