
ಶಿವಮೊಗ್ಗ ನಗರದ ಅಪಾಯಕಾರಿ ಸರ್ಕಲ್..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜೂ. 21: ಶಿವಮೊಗ್ಗ ನಗರದ ಸವಳಂಗ ರಸ್ತೆಯ (savalanga road) ಉಷಾ ನರ್ಸಿಂಗ್ ಹೋಂ ಸಮೀಪದ ಶಿವಶರಣೆ ಅಕ್ಕಮಹಾದೇವಿ ವೃತ್ತದಲ್ಲಿ (shivasharane akkamahadevi circle) ದಿನದಿಂದ ದಿನಕ್ಕೆ ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ!
ಸದರಿ ವೃತ್ತವು (circle) ನಗರದಲ್ಲಿ ಅತೀ ಹೆಚ್ಚು ಜನ – ವಾಹನ ದಟ್ಟಣೆಯಿರುವ ಸರ್ಕಲ್ ಗಳಲ್ಲೊಂದಾಗಿದೆ. ಭಾರೀ ಸರಕು ಸಾಗಾಣೆ ವಾಹನಗಳು ಸೇರಿದಂತೆ, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಕನಿಷ್ಠ ಸುರಕ್ಷತಾ ಕ್ರಮಗಳೂ (Safety measures) ವೃತ್ತದಲ್ಲಿ ಇಲ್ಲವಾಗಿದೆ ಎಂದು ವಾಹನ ಸವಾರರು ದೂರುತ್ತಾರೆ.
ಸದರಿ ವೃತ್ತದ ಸಮೀಪದಲ್ಲಿಯೇ ಮೂರು ಕಡೆಗಳಲ್ಲಿ ಖಾಸಗಿ, ಸರ್ಕಾರಿ ಹಾಗೂ ಸಿಟಿ ಬಸ್ ಗಳ (bus stands) ನಿಲುಗಡೆ ಮಾಡಲಾಗುತ್ತಿದೆ. ಆಟೋ ನಿಲ್ದಾಣವಿದೆ (auto stand). ನೂರಾರು ಜನರು ಬಸ್ ಗಳ ಮೂಲಕ ಸಂಚರಿಸುತ್ತಾರೆ. ಆದರೆ ಸರ್ಕಲ್ ಒಳಗೆ ಬಸ್ ಗಳ ನಿಲುಗಡೆ ಮಾಡುವಂತಹ ಹಾಗೂ ರಸ್ತೆ ಬದಿಯಲ್ಲಿಯೇ ಬಸ್ ಗಳಿಗೆ ನಾಗರೀಕರು ಕಾದು ನಿಲ್ಲುವಂತ ದುಃಸ್ಥಿತಿಯಿದೆ ಎಂದು ಸ್ಥಳೀಯರು ದೂರುತ್ತಾರೆ.
ಈ ಹಿಂದೆ ಸದರಿ ವೃತ್ತದಲ್ಲಿ ಸಿಗ್ನಲ್ ಲೈಟ್ (signal light) ಅಳವಡಿಕೆ ಮಾಡಲಾಗಿತ್ತು. ಆದರೆ ಫ್ಲೈ ಓವರ್ (fly over) ನಿರ್ಮಾಣದ ವೇಳೆ ಸಿಗ್ನಲ್ ಲೈಟ್ ಗಳನ್ನು ತೆರವುಗೊಳಿಸಲಾಗಿದೆ. ತದನಂತರ ಪಾಲಿಕೆ ಆಡಳಿತದಿಂದ (city corporation) ಸದರಿ ವೃತ್ತ ಮೇಲ್ದರ್ಜೆಗೇರಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಕಾಮಗಾರಿ ಅನುಷ್ಠಾನವಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಫ್ಲೈ ಓವರ್ ಮೂಲಕ ಅತೀ ವೇಗವಾಗಿ ವಾಹನಗಳು ಆಗಮಿಸುತ್ತವೆ. ಪಾದಚಾರಿಗಳು (Pedestrians) ಜೀವ ಕೈಯಲ್ಲಿಡಿದು ರಸ್ತೆ ದಾಟುವಂತಹ ಸ್ಥಿತಿಯಿದೆ. ಟ್ರಾಫಿಕ್ ಜಾಮ್ (traffic jam) ಸರ್ವೇ ಸಾಮಾನ್ಯ ಎಂಬಂತಾಗಿದೆ. ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಪ್ರಮುಖ ಸರ್ಕಲ್ ಬಗ್ಗೆ ಸಂಬಂಧಿಸಿದವರು ಸಂಪೂರ್ಣ ನಿರ್ಲಕ್ಷ್ಯವಹಿಸಿರುವುದು ನಿಜಕ್ಕೂ ಖಂಡನೀಯವೆಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇನ್ನಾದರೂ ಸಂಬಂಧಿಸಿದ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕಾಗಿದೆ. ಶಿವಶರಣೆ ಅಕ್ಕಮಹಾದೇವಿ ವೃತ್ತದಲ್ಲಿ ಸುಗಮ ವಾಹನ ಸಂಚಾರಕ್ಕೆ (smooth traffic) ಅಗತ್ಯವಿರುವ ಕ್ರಮಕೈಗೊಳ್ಳಬೇಕಾಗಿದೆ. ವೈಜ್ಞಾನಿಕವಾಗಿ ಸರ್ಕಲ್ ಅಭಿವೃದ್ದಿಗೆ (circle development scientifically) ಮುಂದಾಗಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸುತ್ತಾರೆ.