
42 ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ : 17 ಜನ ಪ್ರತಿಭಟನಾಕಾರರ ವಿರುದ್ದ ಎಫ್ಐಆರ್!
ಶಿವಮೊಗ್ಗ (shivamogga), ಜೂ. 23: ಶಿವಮೊಗ್ಗ ಜಿಲ್ಲೆ ಭದ್ರಾವತಿ (bhadravathi) ತಾಲೂಕಿನ ಚಂದನಕೆರೆ ಗ್ರಾಮದ ದಲಿತ ಸಮುದಾಯದವರು, ಎಂಪಿಎಂ ಕಾರ್ಖಾನೆ (mpm factory) ವಿರುದ್ದ ಚಂದನಕೆರೆ ಗ್ರಾಮದ (chandanakere village) ನೆಡುತೋಪಿನ ಆವರಣದಲ್ಲಿ ನಡೆಸುತ್ತಿರುವ ಪ್ರತಿಭಟನೆಯು ಜೂ. 23 ರ ಭಾನುವಾರಕ್ಕೆ 42 ನೇ ದಿನಕ್ಕೆ ಕಾಲಿರಿಸಿದೆ.
ಈ ನಡುವೆ ಪ್ರತಿಭಟನಾಕಾರರ ವಿರುದ್ದ ಎಂಪಿಎಂ ಅರಣ್ಯ ವಿಭಾಗ ಮರ ಕಡಿತಲೆ ಹಾಗೂ ಮರದ ಚಿಗುರು ಕಟಾವು ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು (police complaint) ನೀಡಿದೆ. ಇದರ ಆಧಾರದ ಮೇಲೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ (holehonnuru police station) 17 ಜನರ ವಿರುದ್ದ ಎಫ್.ಐ.ಆರ್ ದಾಖಲಾಗಿದೆ.
ಈ ಕುರಿತಂತೆ ಹೋರಾಟದ ನೇತೃತ್ವವಹಿಸಿರುವ ದಲಿತ ಸಂಘರ್ಷ ಸಮಿತಿ (dss ಅಂಬೇಡ್ಕರ್ ವಾದ) ಸಂಘಟನೆಯ ಸಂಚಾಲಕ ಟಿ.ಹೆಚ್.ಹಾಲೇಶಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಪ್ರತಿಭಟನೆ ಹತ್ತಿಕ್ಕುವ ಉದ್ದೇಶದಿಂದ ಸುಳ್ಳು ಆರೋಪ ಹೊರಿಸಿ ದೂರು ದಾಖಲಿಸಲಾಗಿದೆ. ಇವ್ಯಾವುದೆ ಬೆದರಿಕೆಗೆ ಮಣಿಯುವುದಿಲ್ಲ. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.
ಚಂದನಕೆರೆ ಗ್ರಾಮದ ಸರ್ವೇ ನಂಬರ್ 12 ರಲ್ಲಿರುವ ಗೋಮಾಳ ಜಾಗದಲ್ಲಿನ 21 ಎಕರೆ ಪ್ರದೇಶವನ್ನು 1961 ರಲ್ಲಿ 14 ಜನರಿಗೆ ಮಂಜೂರಾಗಿತ್ತು. ತದನಂತರ ಸುಮಾರು 40 ಜನರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಸದರಿ ಸರ್ವೇ ನಂಬರ್ ನಲ್ಲಿಯೇ 1985 ರಲ್ಲಿ 140 ಎಕರೆ ಪ್ರದೇಶವನ್ನು ಎಂಪಿಎಂಗೆ ಲೀಸ್ ಕೊಡಲಾಗಿತ್ತು. ಸಾಗುವಳಿ ಚೀಟಿ ನೀಡುವ ಹಂತದಲ್ಲಿದೆ.
ಆದರೆ ಎಂಪಿಎಂ ಆಡಳಿತವು ದಲಿತ ಸಮುದಾಯದವರಿಗೆ ಮಂಜೂರಾಗಿದ್ದ ಪ್ರದೇಶವನ್ನು ಅತಿಕ್ರಮಿಸಿ ನೆಡುತೋಪು ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಇದರ ವಿರುದ್ದ ಸದರಿ ಸ್ಥಳದಲ್ಲಿಯೇ ಪ್ರತಿಭಟನೆ (protest) ನಡೆಸಲಾಗುತ್ತಿದೆ. ಆದರೆ ಜಿಲ್ಲಾಡಳಿತ ಪ್ರತಿಭಟನಾಕಾರರ ಅಹವಾಲು ಆಲಿಸುವ ಗೋಜಿಗೆ ಹೋಗಿಲ್ಲ. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಟಿ.ಹೆಚ್.ಹಾಲೇಶಪ್ಪ ಅವರು ಸ್ಪಷ್ಟಪಡಿಸಿದ್ದಾರೆ.