
ಶಿವಮೊಗ್ಗ : ತುಂಗಾ ಜಲಾಶಯ ಭರ್ತಿ!
ಶಿವಮೊಗ್ಗ (shivamogga), ಜೂ. 27: ಕಡಿಮೆ ಜಲ ಸಂಗ್ರಹಣೆ ಸಾಮರ್ಥ್ಯದ ತುಂಗಾ ಜಲಾಶಯವು (tunga dam), ನೈರುತ್ಯ ಮಾನ್ಸೂನ್ (monsoon) ಮೊದಲ ಮಳೆಗೆ ಗರಿಷ್ಠ ಮಟ್ಟ ತಲುಪಿದೆ. ಈ ಕಾರಣದಿಂದ ಗುರುವಾರ ಬೆಳಿಗ್ಗೆ ಡ್ಯಾಂನಿಂದ ಹೊಸಪೇಟೆಯ ತುಂಗಾಭದ್ರಾ ಜಲಾಶಯಕ್ಕೆ (hospet tungabhadra dam) ನೀರು ಹೊರ ಬಿಡಲಾಗುತ್ತಿದೆ.
ಡ್ಯಾಂನ ಗರಿಷ್ಠ ಮಟ್ಟವಾದ 588.24 ಮೀಟರ್ ಗೆ ನೀರು ತಲುಪುತ್ತಿದ್ದಂತೆ, ಮುನ್ನೆಚ್ಚರಿಕೆ ಕ್ರಮವಾಗಿ ಡ್ಯಾಂನ 2 ಕ್ರಸ್ಟ್ ಗೇಟ್ ಗಳನ್ನು ತೆರೆದು ನೀರು ಹರಿಸಲಾಗುತ್ತಿದೆ. ಪ್ರಸ್ತುತ ಡ್ಯಾಂಗೆ 6 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಲ್ಲಿ 2 ಕ್ರಸ್ಟ್ ಗೇಟ್ ಗಳ ಮೂಲಕ 1 ಸಾವಿರ ಹಾಗೂ ಪವರ್ ಹೌಸ್ ಮೂಲಕ 5 ಸಾವಿರ ಕ್ಯೂಸೆಕ್ ನೀರು ಹೊರ ಹರಿಸಲಾಗುತ್ತಿದೆ. ಜಲಾಶಯದ ನೀರು ಸಂಗ್ರಹಣೆ ಸಾಮರ್ಥ್ಯ 3.24 ಟಿಎಂಸಿ ಆಗಿದೆ.
ಕಳೆದೆರೆಡು ಮೂರು ದಿನಗಳಿಂದ ಜಲಾನಯನ ಪ್ರದೇಶವಾದ ತೀರ್ಥಹಳ್ಳಿ (thirthahalli), ಆಗುಂಬೆ (agumbe) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ (heavy rainfall). ಇದರಿಂದ ಡ್ಯಾಂನ ಒಳಹರಿವಿನಲ್ಲಿ (inflow) ನಿರಂತರವಾಗಿ ಏರಿಕೆ ಕಂಡುಬರಲಾರಂಭಿಸಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ ನೀರನ್ನು ಹೊರ ಹರಿಸಲಾಗುತ್ತಿದೆ.
ಒಳಹರಿವಿನಲ್ಲಿ ಏರಿಕೆ : ಮತ್ತೊಂದೆಡೆ, ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ (linganamakki dam) ಒಳಹರಿವಿನಲ್ಲಿಯೂ (inflow) ಗಣನೀಯ ಏರಿಕೆ ಕಂಡುಬಂದಿದೆ. ಗುರುವಾರದ ಬೆಳಿಗ್ಗೆಯ ಮಾಹಿತಿಯಂತೆ, 16,984 ಕ್ಯೂಸೆಕ್ ಒಳಹರಿವಿದೆ.
ಹೊರಹರಿವನ್ನು (out flow) ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಚುರುಕುಗೊಳ್ಳಲಾರಂಭಿಸಿದೆ. ಇದರಿಂದ ಒಳಹರಿವಿನಲ್ಲಿ ಏರಿಕೆ ಕಂಡುಬರಲಾರಂಭಿಸಿದೆ. ಪ್ರಸ್ತುತ ಡ್ಯಾಂನ ನೀರಿನ ಮಟ್ಟ 1747.60 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷದ ಇದೇ ದಿನದಂದು ಡ್ಯಾಂನಲ್ಲಿ 1740.20 ಅಡಿ ನೀರು ಸಂಗ್ರಹವಾಗಿತ್ತು