
ಮಾರ್ಚ್ 1 ರಿಂದ ಸರ್ಕಾರಿ ನೌಕರರ ಮುಷ್ಕರ : ಬೇಡಿಕೆ ಈಡೇರಿಕೆಯ ಭರವಸೆ ನೀಡಿದ ಮುಖ್ಯಮಂತ್ರಿ
ಬೆಂಗಳೂರು/ಹುಬ್ಬಳ್ಳಿ, ಫೆ. 28: ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯಾದ್ಯಂತ ಮಾರ್ಚ್ 1 ರಿಂದ ರಾಜ್ಯ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಬೇಡಿಕೆ ಈಡೇರುವವರೆಗೂ ಕಚೇರಿಗೆ ಸರ್ಕಾರಿ ನೌಕರರು ಆಗಮಿಸುವುದಿಲ್ಲ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೌಕರರ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಜೊತೆಗೆ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಈಗಾಗಲೇ 7 ನೇ ವೇತನ ಆಯೋಗ ರಚಿಸಲಾಗಿದೆ. 2023-24 ರಲ್ಲಿಯೇ ಶಿಫಾರಸ್ಸು ಜಾರಿಗೊಳಿಸಲಾಗುವುದು ಎಂದು ವಿಧಾನಸಭೆಯಲ್ಲಿಯೇ ಸ್ಪಷ್ಟಪಡಿಸಲಾಗಿದೆ. ಇದಕ್ಕಾಗಿ ಬಜೆಟ್ ನಲ್ಲಿ ಹಣ ಕೂಡ ಮೀಸಲಿರಿಸಲಾಗಿದೆ.
ಆದರೆ ಮಧ್ಯಂತರ ವರದಿ ಪಡೆದು ಶಿಫಾರಸ್ಸು ಅನುಷ್ಠಾನಗೊಳಿಸುವಂತೆ ನೌಕರರ ಸಂಘದವರು ಬೇಡಿಕೆ ಮುಂದಿಟ್ಟಿದ್ಧಾರೆ. ಅದಕ್ಕೂ ಕೂಡ ಒಪ್ಪಿಕೊಳ್ಳಲಾಗಿದೆ. ಅದರಂತೆ ಆಯೋಗದ ಜೊತೆ ಸಮಾಲೋಚಿಸಿ, ಮಧ್ಯಂತರ ವರದಿ ಪಡೆದು ಶಿಫಾರಸ್ಸು ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಸಂಘದ ನಿರ್ಧಾರವೇನು?: ಮಾರ್ಚ್ 1 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಈಗಾಗಲೇ ಸ್ಪಷ್ಟಪಡಿಸಿದ್ದರೆ. ಮುಖ್ಯಮಂತ್ರಿಗಳು ಸಂಘದ ಬೇಡಿಕೆ ಈಡೇರಿಕೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ಸಿಎಂ ಹೇಳಿಕೆಯ ಕುರಿತಂತೆ ನೌಕರರ ಸಂಘದ ರಾಜ್ಯಾಧ್ಯಕ್ಷರು ಇನ್ನಷ್ಟೆ ಪ್ರತಿಕ್ರಿಯೆ ನೀಡಬೇಕಾಗಿದೆ. ಮುಷ್ಕರ ಆರಂಭವಾಗುವುದೇ? ಇಲ್ಲವೇ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
👉 ನೌಕರರ ಪ್ರಮುಖ ಬೇಡಿಕೆಗಳೇನು?
ರಾಜ್ಯ ಸರ್ಕಾರಿ ನೌಕರರ ವೇತನ, ತುಟ್ಟಿ ಭತ್ಯೆ, ಸೌಲಭ್ಯಗಳ ಪರಿಷ್ಕರಣೆಗಾಗಿ ನೇಮಿಸಲಾಗಿರುವ 7 ನೇ ವೇತನ ಆಯೋಗದ ಶಿಫಾರಸ್ಸುಗಳ ಮಧ್ಯಂತರ ವರದಿ ಪಡೆದು ಶೇ.40 ರಷ್ಟು ಫಿಟ್ಮೆಂಟ್ ಅನ್ನು ಜುಲೈ 1 ರಿಂದ ಜಾರಿಗೊಳಿಸಬೇಕು.
ಈಗಾಗಲೇ ಹಲವು ರಾಜ್ಯಗಳಲ್ಲಿ ಎನ್.ಪಿ.ಎಸ್. ವ್ಯವಸ್ಥೆ ರದ್ದುಗೊಳಿಸಲಾಗಿದೆ. ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಎನ್.ಪಿ.ಎಸ್ ರದ್ದುಗೊಳಿಸಿ, ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂಬುವುದು ಸಂಘದ ಪ್ರಮುಖ ಬೇಡಿಕೆಯಾಗಿದೆ.