
ನಗರಾಭಿವೃದ್ದಿ ಪ್ರಾಧಿಕಾರದ ಅಧೀನದ ಬಡಾವಣೆಗಳಲ್ಲಿ ಮನೆ ನಿರ್ಮಾಣಕ್ಕೆ ಸಿಗದ ಲೈಸೈನ್ಸ್!
ಶಿವಮೊಗ್ಗ, ಫೆ. 28: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಬಡಾವಣೆಗಳಲ್ಲಿ ನಿವೇಶನ ಹೊಂದಿರುವವರು ಮನೆ ಕಟ್ಟಲು ಪರವಾನಿಗೆ ಸಿಗದೆ, ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂದು ಶಿವಮೊಗ್ಗ ನಗರ ಕಾಂಗ್ರೆಸ್ ಸಮಿತಿ ಆರೋಪಿಸಿದೆ.
ಈ ಸಂಬಂಧ ಮಂಗಳವಾರ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರಿಗೆ ಸಂಘಟನೆ ಮನವಿ ಪತ್ರ ಅರ್ಪಿಸಿದೆ. ಈ ಮೊದಲಿನಿಂದಲೂ ಪ್ರಾಧಿಕಾರದ ಅಧೀನದಲ್ಲಿರುವ ಬಡಾವಣೆ ನಿವೇಶನದಾರರಿಗೆ ಮನೆ ಕಟ್ಟಲು ಪ್ರಾಧಿಕಾರ ಆಡಳಿತವೇ ಪರವಾನಿಗೆ ನೀಡುತ್ತಿತ್ತು.
ಆದರೆ ನಗರಾಭಿವೃದ್ದಿ ಇಲಾಖೆ ಹೊಸ ಆದೇಶದ ಪ್ರಕಾರ, ಪ್ರಾಧಿಕಾರದ ಅಧೀನದಲ್ಲಿರುವ ನಿವೇಶನದಾರರು ಮನೆ ನಿರ್ಮಿಸಲು ಪಾಲಿಕೆ ಆಡಳಿತದಿಂದ ಲೈಸೈನ್ಸ್ ಪಡೆದುಕೊಳ್ಳಬೇಕಾಗಿದೆ. ಪ್ರಾಧಿಕಾರ ಲೈಸೈನ್ಸ್ ನೀಡುವುದನ್ನು ಸ್ಥಗಿತಗೊಳಿಸಿದೆ ಎಂದು ಸಂಘಟನೆ ತಿಳಿಸಿದೆ.
ಪಾಲಿಕೆ ಆಡಳಿತವು ಪ್ರಾಧಿಕಾರದಿಂದ ಬಡಾವಣೆ ಹಸ್ತಾಂತರವಾದರೆ ಮಾತ್ರ, ಲೈಸೈನ್ಸ್ ನೀಡುವುದಾಗಿ ಹೇಳುತ್ತಿದೆ. ಇದರಿಂದ ಪ್ರಾಧಿಕಾರದ ಅಧೀನದಲ್ಲಿರುವ ಬಡಾವಣೆಗಳ ನಾಗರೀಕರು ಮನೆ ಕಟ್ಟಲು ಹರಸಾಹಸ ನಡೆಸುವಂತಾಗಿದೆ. ತಕ್ಷಣವೇ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ದೀಪಕ್ ಸಿಂಗ್, ಮಾಜಿ ಕಾರ್ಪೋರೇಟರ್ ರಘು ಬಾಲರಾಜ್, ಶಿವಾನಂದ್, ಸಂಜಯ್, ಕಶ್ಯಪ್, ಗೋಪಿ ಮೊದಲಿಯಾರ್, ವಿಜಯ್, ಮಂಜುನಾಥಗೌಡ, ನಿಹಾಲ್, ಗಿರೀಶ್ ಮೊದಲಾದವರಿದ್ದರು.