
ಚಕ್ರಾ – ಸಾವೇಹಕ್ಲು ಮುಳುಗಡೆ ಸಂತ್ರಸ್ತರಿಗೆ ಕಿರುಕುಳ : ಶಿವಮೊಗ್ಗ ಡಿಸಿ ಕಚೇರಿ ಎದುರು ಪ್ರತಿಭಟನೆ
ಶಿವಮೊಗ್ಗ (shivamogga), ಜು. 20: ಚಕ್ರಾ – ಸಾವೇಹಕ್ಲು (chakra – savehakklu) ಮುಳುಗಡೆ ಸಂತ್ರಸ್ತರಿಗೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿರುವವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ, ಚಕ್ರಾ – ಸಾವೇಹಕ್ಲು ಮುಳುಗಡೆ ಸಂತ್ರಸ್ತರ ಪುನರ್ವಸತಿ ಹೋರಾಟ ಸಮಿತಿಯು ಶನಿವಾರ ಶಿವಮೊಗ್ಗ ನಗರದ ಡಿಸಿ ಕಚೇರಿ (shimoga dc office) ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಿತು.
ಶಿವಮೊಗ್ಗ ತಾಲೂಕು ಕಸಬಾ 1 ನೇ ಹೋಬಳಿ ಅಗಸವಳ್ಳಿ ಗ್ರಾಮದ (agasavalli village) ಸರ್ವೇ ನಂಬರ್ 167 ರಲ್ಲಿ ಚಕ್ರಾ – ಸಾವೇಹಕ್ಲು ಮುಳುಗಡೆ ಸಂತ್ರಸ್ತರಿಗೆ 1148. 30 ಎಕರೆ ಮೀಸಲಿರಿಸಿದೆ. ಇದರಲ್ಲಿ 470 ಎಕರೆ ಕೃಷಿ ಭೂಮಿಯನ್ನು ಪೋಡಿ, ಹದ್ದುಬಸ್ತು ಮಾಡಿ ತಲಾ ಎರಡು – ಮೂರು ಎಕರೆಯಂತೆ ಸಂತ್ರಸ್ತರಿಗೆ ಹಂಚಿಕೆ ಮಾಡಿದೆ. ಖಾತೆ, ಪಹಣಿ ನೀಡಲಾಗಿದೆ ಎಂದು ಸಂಘಟನೆ ತಿಳಿಸಿದೆ.
ಕೆಲ ದಂಧೆಕೋರರು ಯಾವುದೇ ಖಾತೆ, ಪಹಣಿ ಇಲ್ಲದ ಸಂತ್ರಸ್ತರಿಗೆ ಮೀಸಲಾದ ಜಮೀನಿಗೆ ಅಕ್ರಮವಾಗಿ ರಾತ್ರಿ ವೇಳೆ ಪ್ರವೇಶ ಮಾಡಿ ಜಮೀನಿನ ಮಣ್ಣು ತೆಗೆದು ಮಾರಾಟ ಮಾಡುತ್ತಿದ್ದಾರೆ. ಹಾಗೆಯೇ ಲೇಔಟ್ ನಿರ್ಮಿಸಿ ನಿವೇಶನ ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಸಂತ್ರಸ್ತರಿಗೆ ಸೇರಿದ ಜಮೀನುಗಳ ಸುತ್ತ ತಂತಿ ಬೇಲಿ ಹಾಕಿ, ಸಂತ್ರಸ್ತರು ಜಮೀನು ಪ್ರವೇಶಿದಂತೆ ಮಾಡುತ್ತಿದ್ದಾರೆ. ಬೆದರಿಕೆ ಹಾಕುವುದು, ಹಲ್ಲೆ ನಡೆಸುವ ಕಾನೂನುಬಾಹಿರ ಕೃತ್ಯ ನಡೆಸುತ್ತಿದ್ದಾರೆ. ಈ ಕುರಿತಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ (tunga nagara police station) 30 ಕ್ಕೂ ಅಧಿಕ ದೂರುಗಳನ್ನು ನೀಡಲಾಗಿದೆ. ಆದರೆ ಪೊಲೀಸರು ಆರೋಪಿಗಳ ವಿರುದ್ದ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ.
ತಕ್ಷಣವೇ ಜಿಲ್ಲಾಡಳಿತ (district administration) ಸಂತ್ರಸ್ತರಿಗೆ ರಕ್ಷಣೆ ನೀಡುವ ಕಾರ್ಯ ನಡೆಸಬೇಕು. ದೌರ್ಜನ್ಯ ನಡೆಸುತ್ತಿರುವವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. ಅಕ್ರಮವಾಗಿ ನಿರ್ಮಿಸಿರುವ ಬೇಲಿಗಳನ್ನು ತೆರವುಗೊಳಿಸಬೇಕು ಎಂದು ಸಂಘಟನೆಯು ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ, ಸಾಮಾಜಿಕ ಹೋರಾಟಗಾರ ತೀ.ನಾ.ಶ್ರೀನಿವಾಸ್, ಮುಖಂಡರಾದ ಮಲ್ಲಿಕಾರ್ಜುನ್ ಹಕ್ರೆ, ಶ್ರೀಕರ್ ಸಂಪೆಕಟ್ಟೆ, ಹಾಲಗದ್ದೆ ಉಮೇಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.