
ಶಿವಮೊಗ್ಗ : ಕುಸಿದು ಬೀಳುತ್ತಿರುವ ರಾಷ್ಟ್ರೀಯ ಹೆದ್ದಾರಿ ತಡೆಗೋಡೆ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜು. 22: ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದ (gadikoppa) ಶರಾವತಿ ಡೆಂಟಲ್ ಕಾಲೇಜ್ ಸಮೀಪದ ರಾಷ್ಟ್ರೀಯ ಹೆದ್ದಾರಿಯ (national highway) ಸೇತುವೆಯ ತಡೆಗೋಡೆ ಕುಸಿದು ಬೀಳುತ್ತಿದ್ದು, ಅನಾಹುತಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಗಳು ಗೋಚರವಾಗುತ್ತಿವೆ.
ತುಂಗಾ ಮೇಲ್ದಂಡೆ ನಾಲೆಗೆ (canal) ಸೇತುವೆ ನಿರ್ಮಾಣ ಮಾಡಲಾಗಿದೆ. ಕಳೆದ ಹಲವು ತಿಂಗಳುಗಳ ಹಿಂದೆಯೇ ಹೆದ್ಧಾರಿ ತಡೆಗೋಡೆ (retaining wall) ಬಿದ್ದಿತ್ತು. ಇತ್ತೀಚೆಗೆ ಬಿದ್ದ ಭಾರೀ ಮಳೆಗೆ (heavy rainfall) ತಡೆಗೋಡೆ ಮತ್ತಷ್ಟು ಭಾಗಕ್ಕೆ ಹಾನಿಯಾಗಿದೆ. ಸೇತುವೆ ತಳಭಾಗದ ಮಣ್ಣು ಕಿತ್ತು ಹೋಗುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸದರಿ ಹೆದ್ದಾರಿಯಲ್ಲಿ ಅತ್ಯದಿಕ ಪ್ರಮಾಣದ ವಾಹನ ದಟ್ಟಣೆಯಿದೆ (heavy traffic). ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕಳೆದ ಕೆಲ ವರ್ಷಗಳ ಹಿಂದಷ್ಟೆ ಹೆದ್ದಾರಿ ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಸಲಾಗಿದೆ.
ಎಲ್ಲದಕ್ಕಿಂತ ಮುಖ್ಯವಾಗಿ ಸೇತುವೆ ಕೆಳಭಾಗದಲ್ಲಿರುವ ತುಂಗಾ ನಾಲೆಯು ಸರಿಸುಮಾರು 100 ಅಡಿಯಷ್ಟು ಆಳವಿದೆ. ಭಾರೀ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಸಂಜೆಯ ವೇಳೆ ಸದರಿ ಸ್ಥಳದಲ್ಲಿ ಸೂಕ್ತ ಬೀದಿ ದೀಪಗಳ ವ್ಯವಸ್ಥೆಯೂ ಇಲ್ಲವಾಗಿದೆ.
ಇಷ್ಟೆಲ್ಲ ಅವ್ಯವಸ್ಥೆಯಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ತಡೆಗೋಡೆ ದುರಸ್ತಿ (repair) ಮಾಡುವುದಿರಲಿ, ಕನಿಷ್ಠ ಸುರಕ್ಷತಾ ಕ್ರಮಗಳನ್ನು (safety measures) ಕೈಗೊಂಡಿಲ್ಲ. ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ. ತಡೆಗೋಡೆ ಕುಸಿತ ತಡೆಗಟ್ಟದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಅನಾಹುತಕ್ಕೆ (disaster) ಎಡೆ ಮಾಡಿಕೊಡುವ ಸಾಧ್ಯತೆಗಳಿವೆ ಎಂದು ನಾಗರೀಕರು ಆತಂಕ ವ್ಯಕ್ತಪಡಿಸುತ್ತಾರೆ.
ಇನ್ನಾದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯು (national highway dept) ಅಪಾಯಕಾರಿ ಸ್ಥಿತಿಯಲ್ಲಿರುವ ತಡೆಗೋಡೆ ದುರಸ್ತಿಗೆ ಕ್ರಮಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ (district administration) ಕೂಡ ಆದ್ಯ ಗಮನಹರಿಸಬೇಕು ಎಂದು ನಾಗರೀಕರು ಆಗ್ರಹಿಸುತ್ತಾರೆ.