ತೊಂದರೆಗೆ ಸರ್ಕಾರವೇ ನೇರ ಕಾರಣ  : ಕಾಂಗ್ರೆಸ್ ಮುಖಂಡ ಮಧು ಆಕ್ರೋಶ!

ಶಿವಮೊಗ್ಗ, ಮಾ.1: ಸರ್ಕಾರಿ ನೌಕರರ ಮುಷ್ಕರದಿಂದ ಉಂಟಾಗುತ್ತಿರುವ ಸಾರ್ವಜನಿಕರ ತೊಂದರೆಗೆ ಸರ್ಕಾರವೇ ನೇರ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಿ.ಮಧುಕುಮಾರ್ ಕಿಡಿ ಕಾರಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಸರ್ಕಾರಿ ನೌಕರರು 7ನೇ ವೇತನ  ಆಯೋಗ, ಹಿಂದಿನ ಪಿಂಚಣಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತಿರುವುದು ತಪ್ಪೇನಲ್ಲ. ಆದರೆ, ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ನೌಕರರು ಹಾಗೂ ಸರ್ಕಾರದ ನಡುವಿನ ಹಗ್ಗ ಜಗ್ಗಾಟದಲ್ಲಿ ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ ಎಂದು ಮಧು ಬೇಸರ ವ್ಯಕ್ತಪಡಿಸಿದ್ದಾರೆ.

ಪೂರ್ವ ನಿಯೋಜಿತ ಮುಷ್ಕರ ಇದಾಗಿದ್ದರೂ ಸರ್ಕಾರ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಇದರಿಂದ ಜನರು ಪರದಾಡುವಂತಾಗಿದೆ. ಹಲವೆಡೆ ವೃದ್ಧರು, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಸರ್ಕಾರಿ ಕಚೇರಿಗಳಲ್ಲಿ ಕಾದು ಕಾದು ಹಿಡಿಶಾಪ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆಗಳು, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ಸರ್ಕಾರಿ ಹಾಸ್ಟೆಲ್, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹೀಗೆ ಹಲವೆಡೆ ಜನರು ತತ್ತರಿಸಿ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Previous post ಗಾಂಜಾ ಸಾಗಾಣೆ : ಮಹಿಳೆಗೆ 4 ವರ್ಷ ಕಠಿಣ ಜೈಲು ಶಿಕ್ಷೆ !
Next post ದಾವಣಗೆರೆ ಎಸ್ಪಿ ವಿರುದ್ದ ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘ ಆಕ್ರೋಶ!