
ಕುಸಿಯುತ್ತಿರುವ ಸೇತುವೆ ತಡೆಗೋಡೆ : ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಬ್ಯಾರಿಕೇಡ್ ಹಾಕಿ ಮುನ್ನೆಚ್ಚರಿಕೆ!
ಶಿವಮೊಗ್ಗ (shivamogga), ಜು. 25: ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದ (gadikoppa) ಶರಾವತಿ ಡೆಂಟಲ್ ಕಾಲೇಜ್ ಬಳಿಯ ರಾಷ್ಟ್ರೀಯ ಹೆದ್ದಾರಿ (national highway) ಸೇತುವೆ ಬಳಿ ಕುಸಿಯುತ್ತಿರುವ ತಡೆಗೋಡೆ ಬಳಿ, ಕೊನೆಗೂ ರಾಷ್ಟ್ರೀಯ ಹೆದ್ದಾರಿ (national highway) ಇಲಾಖೆಯು ಕೆಲ ಸುರಕ್ಷತಾ ಕ್ರಮಗಳನ್ನು (Safety measures) ಕೈಗೊಂಡಿದೆ.
ತಡೆಗೋಡೆ ಕುಸಿತ (barrier collapse) ಕುರಿತಂತೆ ‘ಉದಯ ಸಾಕ್ಷಿ’ ನ್ಯೂಸ್ ವೆಬ್’ಸೈಟ್ ನಲ್ಲಿ ಪ್ರಕಟವಾದ ಸಚಿತ್ರ ಹಾಗೂ ವೀಡಿಯೋ ವರದಿಯ ನಂತರ ಎಚ್ಚೆತ್ತುಕೊಂಡ ಇಲಾಖೆಯು, ಸ್ಥಳದಲ್ಲಿ ಪೊಲೀಸ್ ಇಲಾಖೆಯ ನೆರವಿನೊಂದಿಗೆ ಬ್ಯಾರಿಕೇಡ್ ಹಾಗೂ ಎಚ್ಚರಿಕೆಯ ಟೇಪ್ (barricade and caution tape) ಹಾಕಿದೆ.
ತಾತ್ಕಾಲಿಕವಾಗಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದ್ದು, ಮಳೆಗಾಲ ಪೂರ್ಣಗೊಂಡ ನಂತರ ತಡೆಗೋಡೆ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಹೆದ್ದಾರಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಕಳೆದ ಹಲವು ತಿಂಗಳುಗಳ ಹಿಂದೆಯೇ ಹೆದ್ದಾರಿಯ ಸೇತುವೆಯ ಒಂದು ಬದಿಯ ತಡೆಗೋಡೆಯ ಅಲ್ಪ ಭಾಗ ಕುಸಿತವಾಗಿತ್ತು. ಇತ್ತೀಚೆಗೆ ಬೀಳುತ್ತಿರುವ ಭಾರೀ ಮಳೆಗೆ (heavy rainfall) ಮಣ್ಣು ಕುಸಿದು ಬೀಳಲಾರಂಭಿಸಿತ್ತು. ಇದು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು.
ಸ್ಥಳದಲ್ಲಿ ಇಷ್ಟೆಲ್ಲ ಅಪಾಯಕಾರಿ ಸ್ಥಿತಿಯಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಯಾವುದೇ ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆ ಮಾಡಿಲ್ಲ. ತಡೆಗೋಡೆ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.