
ದಾವಣಗೆರೆ ಎಸ್ಪಿ ವಿರುದ್ದ ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘ ಆಕ್ರೋಶ!
ಶಿವಮೊಗ್ಗ, ಮಾ. 1: ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದ ಬಂದೋಬಸ್ತ್ ಗೆ ಆಗಮಿಸಿದ್ದ ದಾವಣಗೆರೆ ಎಸ್ಪಿ ಸಿ.ಬಿ.ರಿಷ್ಯಂತ್ ಅವರು, ಪತ್ರಕರ್ತರೋರ್ವರೊಂದಿಗೆ ಅತೀರೇಕದಿಂದ ವರ್ತಿಸಿರುವುದು ಖಂಡನೀಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಬುಧವಾರ ಸಂಘಟನೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ವಿಮಾನ ನಿಲ್ದಾಣ ವೇದಿಕೆ ಸಮಾರಂಭ ಪೂರ್ಣಗೊಂಡು ಗಣ್ಯರು ನಿರ್ಗಮಿಸಿದ ನಂತರ, ಟರ್ಮಿನಲ್ ಕಟ್ಟಡ ಬಳಿ ನೆರೆದಿದ್ದ ನಾಗರೀಕರ ಮೇಲೆ ದಾವಣಗೆರೆಯ ಎಸ್ಪಿ ಸಿ.ಬಿ.ರಿಷ್ಯಂತ್ ನೇತೃತ್ವದ ಪೊಲೀಸ್ ತಂಡ ಲಾಠಿಚಾರ್ಜ್ ನಡೆಸಿತ್ತು.
ಸ್ಥಳದಲ್ಲಿದ್ದ ಪತ್ರಕರ್ತ ಆರ್.ಎಸ್.ಹಾಲಸ್ವಾಮಿ ಅವರು ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು. ಇದನ್ನು ಕಂಡ ಎಸ್ಪಿ ರಿಷ್ಯಂತ್ ಅವರು ತಕ್ಷಣವೆ ಪೊಲೀಸ್ ಸಿಬ್ಬಂದಿಗಳ ಮೂಲಕ ಹಾಲಸ್ವಾಮಿ ಅವರನ್ನು ಪೊಲೀಸ್ ವ್ಯಾನಿನಲ್ಲಿ ಕೂಡಿ ಹಾಕಿಸಿದ್ದರು. ಅವರ ಮೊಬೈಲ್ ಕಿತ್ತುಕೊಂಡು ಅದರಲ್ಲಿದ್ದ ಘಟನೆಯ ವೀಡಿಯೋಗಳನ್ನು ಡಿಲಿಟ್ ಮಾಡಿಸಿದ್ದರು.
ದಾವಣಗೆರೆ ಎಸ್ಪಿ ಅತಿರೇಕದಿಂದ ವರ್ತಿಸಿದ್ದಾರೆ ಎಂದು ಸಂಘ ಆರೋಪಿಸಿದೆ.
ಸುಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ಪತ್ರಕರ್ತನನ್ನು ವ್ಯಾನಿನಲ್ಲಿ ಅಕ್ರಮವಾಗಿ ಕೂಡಿಟ್ಟಿದ್ದಾರೆ. ಗಂಭೀರ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ ಎಂದು ಸಂಘ ದೂರಿದೆ.
ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಎಸ್ಪಿ ರಿಷ್ಯಂತ್ ಅವರ ವಿರುದ್ದ ಶಿಸ್ತುಕ್ರಮ ಜರುಗಿಸಬೇಕು. ಜೊತೆಗೆ ಪತ್ರಕರ್ತನ ಕ್ಷಮೆಯಾಚಿಸಲು ಸೂಚಿಸಬೇಕು ಎಂದು ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ವಿ.ಟಿ., ರಾಜ್ಯ ಸಮಿತಿ ನಿರ್ದೇಶಕರಾದ ಎನ್.ರವಿಕುಮಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.