ಲೈನ್‌ಮ್ಯಾನ್‌ಗಳಿಗೆ ಜೆಸಿಐ ಶಿವಮೊಗ್ಗ ಭಾವನಾದಿಂದ ಸನ್ಮಾನ

ಶಿವಮೊಗ್ಗ, ಮಾ. 1: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನೇಕರು ಸದ್ದಿಲ್ಲದೇ ನಿರಂತರ ಸೇವೆ ಮಾಡುತ್ತಿದ್ದು, ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರ ಪಾತ್ರವು ಪ್ರಮುಖ. ಕೆಇಬಿ ಲೈನ್‌ಮ್ಯಾನ್‌ಗಳ ಸೇವೆ ಅಪಾರ ಎಂದು ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷೆ ಪೂರ್ಣಿಮಾ ಸುನೀಲ್ ಹೇಳಿದರು.
ಶಿವಮೊಗ್ಗ ನಗರದ ಶ್ರೀ ಕೋಟೆ ಮಾರಿಕಾಂಬಾ ದೇವಸ್ಥಾನದ ಸಭಾಭವನದಲ್ಲಿ ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ವತಿಯಿಂದ ಸಲ್ಯೂಟ್ ದಿ ಸೈಲೆಂಟ್ ವರ್ಕರ್ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಇಬಿ ಲೈನ್‌ಮ್ಯಾನ್‌ಗಳಿಗೆ ಸನ್ಮಾನಿಸಿ ಮಾತನಾಡಿದರು.
ಲೈನ್‌ಮ್ಯಾನ್ ಆಗಿ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯು ವರ್ಷದ 365 ದಿನಗಳಲ್ಲಿಯೂ ಎಂತಹ ಸಮಸ್ಯೆ ಕಂಡುಬಂದರೂ ಸ್ಥಳಕ್ಕೆ ತೆರಳಿ ಸರಿಪಡಿಸುವ ಕೆಲಸ ಮಾಡುತ್ತಾರೆ. ಸಮಾಜಕ್ಕಾಗಿ ನಿರಂತರವಾಗಿ ಸೇವೆ ಮಾಡುತ್ತಿರುತ್ತಾರೆ ಎಂದು ತಿಳಿಸಿದರು.
ಕೆಇಬಿ ಲೈನ್‌ಮ್ಯಾನ್ ಆಗಿ ಕೆಲಸ ಮಾಡುವ ಸಿಬ್ಬಂದಿ ಜೀವನ ಹಂಗು ತೊರೆದು ಕೆಲಸ ಮಾಡಬೇಕಾಗುತ್ತದೆ. ಕಠಿಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಉತ್ತಮವಾಗಿ ವಿದ್ಯುತ್ ಸೌಕರ್ಯ ಕೊಡಲು ಶ್ರಮಿಸುತ್ತಿದ್ದಾರೆ ಎಂದರು.
ಸಮಾಜಮುಖಿ ಚಿಂತನೆಯೊಂದಿಗೆ ಸೇವಾ ಚಟುವಟಿಕೆಗಳನ್ನು ಜೆಸಿಐ ಸಂಸ್ಥೆಯು ನಡೆಸಿಕೊಂಡು ಬರುತ್ತಿದ್ದು, ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿದೆ. ಪ್ರತಿ ತಿಂಗಳು ವಿಶೇಷ ಕಾರ್ಯಕ್ರಮ ಆಯೋಜಿಸಿಕೊಂಡು ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗೌರವಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.
ಕೆಇಬಿ ಲೈನ್‌ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆನಂದ್, ನಾಗರಾಜ್, ಶಿವಕುಮಾರ್, ಪ್ರಶಾಂತ್ ಕುಮಾರ್, ವಿಜಯ ಕುಮಾರ್, ತಮ್ಮಯ್ಯ ಅವರಿಗೆ ಗೌರವಪೂರ್ವಕವಾಗಿ ಜೆಸಿಐ ಶಿವಮೊಗ್ಗ ಭಾವನಾದಿಂದ ಸನ್ಮಾನಿಸಲಾಯಿತು.
ಜೆಸಿಐ ಸಂಸ್ಥೆಯು ಸಮಾಜಮುಖಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವ ಜತೆಯಲ್ಲಿ ನಮ್ಮ ಸೇವೆಗಳನ್ನು ಗುರುತಿಸಿ ಗೌರವಿಸುತ್ತಿರುವುದು ಅತ್ಯಂತ ಸಂತೋಷ ತಂದಿದೆ. ವಿವಿಧ ಕ್ಷೇತ್ರಗಳಲ್ಲಿ ಇದೇ ರೀತಿ ಸೇವೆ ಸಲ್ಲಿಸುತ್ತಿರುವವರಿಗೆ ಗುರುತಿಸುವ ಕೆಲಸ ಆಗಬೇಕು ಎಂದು ಸನ್ಮಾನಿತರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜೆಸಿಐ ಶಿವಮೊಗ್ಗ ಭಾವನಾ ಕಾರ್ಯದರ್ಶಿ ಕವಿತಾ ಜೋಯಿಸ್ ಮತ್ತಿತರರು ಉಪಸ್ಥಿತರಿದ್ದರು.

Previous post ದಾವಣಗೆರೆ ಎಸ್ಪಿ ವಿರುದ್ದ ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘ ಆಕ್ರೋಶ!
Next post ಮಲೇರಿಯಾ, ಕ್ಷಯ, ಅನಿಮೀಯ ಮುಕ್ತ ಭಾರತಕ್ಕೆ ಪಣ – ಜಿ.ವಿಜಯಕುಮಾರ್